ಭಾವಗೀತೆ ಪ್ರಪಂಚವು ಚೆನ್ನವೀರ ಕಣವಿ ಅವರನ್ನು ಅಪ್ಪಿಕೊಂಡಂತೆ, ಸಿನಿಮಾ ರಂಗ ಅವರನ್ನು ತಬ್ಬಿಕೊಳ್ಳಲಿಲ್ಲ. ಕಣವಿ ಅವರ ಸಾಕಷ್ಟು ಗೀತೆಗಳು ಭಾವಗೀತೆಯ ಪ್ರಪಂಚದಲ್ಲಿ ಸದ್ದು ಮಾಡಿದರೂ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಮಾತ್ರ, ಅವರ ಗೀತೆಗಳನ್ನು ಯಾವುದೇ ಸಿನಿಮಾಗೂ ಬಳಸಿಕೊಳ್ಳಲಿಲ್ಲ. ಅದಕ್ಕೆ ಕಾರಣವನ್ನೂ ಕಣವಿ ಅವರು ಹುಡುಕಲಿಲ್ಲ. ತಮ್ಮ ಪಾಡಿಗೆ ತಾವು ಬರೆಯುತ್ತಲೇ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದರು.
Advertisement
ಈ ಕುರಿತು ಹಿರಿಯ ಸಾಹಿತಿ ಕೆ.ರಾಜಕುಮಾರ್ ಹೇಳುವುದು ಹೀಗೆ, “ಕಣವಿ ಅವರು ನಮ್ಮ ನಡುವಿನ ಭಾವಜೀವಿ. ಅವರು ಬದುಕನ್ನು ನೋಡಿದ ರೀತಿಯೇ ಸೊಗಸಾಗಿತ್ತು. ಹಾಗಾಗಿ ಸಿನಿಮಾ ಸಾಹಿತ್ಯಕ್ಕೆ ಹೇಳಿ ಮಾಡಿಸಿದ್ದ ಬರಹಗಾರ ಅವರಾಗಿದ್ದರು. ಭಾವಗೀತೆಯ ಲೋಕದಲ್ಲಿ ಕಣವಿ ಅವರದ್ದು ದೊಡ್ಡ ಹೆಸರಿದ್ದರೂ, ಅವರು ಸಿನಿಮಾಗಾಗಿ ನೇರವಾಗಿ ಬರೆಯಲಿಲ್ಲ. ಅವರ ಗೀತೆಗಳನ್ನೂ ಸಿನಿಮಾ ರಂಗ ತಗೆದುಕೊಳ್ಳಲಿಲ್ಲ. ನಿಜಕ್ಕೂ ಇದೊಂದು ನೋವಿನ ಸಂಗತಿ. ಅವರ ಅನೇಕ ಗೀತೆಗಳು ಈವರೆಗೂ ಬಂದಿರುವ ಅನೇಕ ಸಿನಿಮಾಗಳಿಗೆ ಹೊಂದಿಕೆ ಆಗುತ್ತಿದ್ದವು. ಆದರೆ, ಯಾಕೆ ಅವುಗಳನ್ನು ಬಳಸಿಕೊಳ್ಳಲಿಲ್ಲ ಎಂದು ಈಗಲೂ ಹುಡುಕುತ್ತಿದ್ದೇನೆ’ ಎನ್ನುತ್ತಾರೆ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ
Advertisement
Advertisement
‘ಏಳೆನ್ನ ಮನದನ್ನೆ’, ‘ಹೂವು ಹೊರಳುವವು’, ‘ಬಾ ಮಲ್ಲಿಗೆ ಬಾ ಮೆಲ್ಲಗೆ’, ‘ಬರುವುದೆಲ್ಲ ಬರಲಿ’, ‘ಒಂದು ಮುಂಜಾವಿನಲಿ’, ‘ಮಳೆ ಸುರಿದು’, ‘ಬಿಸಿಲೇರಿತು’ ಹೀಗೆ ನೂರಾರು ಭಾವಗೀತೆಗಳನ್ನು ಕಣವಿ ಅವರು ಬರೆದಿದ್ದಾರೆ. ಕನ್ನಡದ ಮತ್ತೊಂದು ನಾಡಗೀತೆ ಎಂದೇ ಸುಪ್ರಸಿದ್ಧಿಯಾದ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಗೀತೆಗಳು ಮನೆ ಮನದಲ್ಲಿ ನಿತ್ಯಮಂತ್ರ. ಜಿ.ವಿ. ಅತ್ರಿ ಅವರ ಕಂಠದಲ್ಲಿ ‘ಮಲ್ಲಿಗೆ ದಂಡೆ ಮತ್ತು ಏಳೆನ್ನ ಮನದನ್ನೆ’, ರತ್ನಮಾಲಾ ಪ್ರಕಾಶ್ ಹಾಡಿರುವ ‘ಸೂರ್ಯನ ಕಡೆಗೆ’, ಸಿ.ಅಶ್ವತ್ಥ್ ಸಂಯೋಜನೆಯಲ್ಲಿ ಮೂಡಿ ಬಂದ, ಬಿ.ಆರ್.ಛಾಯಾ ಹಾಡಿದ ‘ಒಂದು ಮುಂಜಾವಿನಲಿ’ ಹೀಗೆ ಸಾಕಷ್ಟು ಗೀತೆಗಳು ಜನರ ಹೃದಯದಲ್ಲಿವೆ.