ಬೆಂಗಳೂರು: ಕನ್ನಡದ ಸಮನ್ವಯ ಕವಿ, ಸುನೀತಗಳ ಸಾಮ್ರಾಟ್ ಎಂದು ಪ್ರಸಿದ್ಧರಾದ, ಚೆಂಬೆಳಕಿನ ಕವಿ ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Advertisement
ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿದ ಟಿ.ಎಸ್.ನಾಗಾಭರಣ ಅವರು, ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿದ್ದ ಚನ್ನವೀರ ಕಣವಿ ಅವರು ಧಾರವಾಡದ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದು ಆಗ ತಾನೆ ಆರಂಭವಾಗಿದ್ದ ವಿಶ್ವವಿದ್ಯಾಲಯದ ಪ್ರಸಾರಂಗ ವಿಭಾಗದ ಕಾರ್ಯದರ್ಶಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಸ್ನೇಹ, ಪ್ರೀತಿ, ಸೌಜನ್ಯ, ಮಾನವೀಯ ಅಂತಃಕರಣದ ಕವಿಯಾಗಿ ಪ್ರಸಿದ್ಧರಾದ ನಾಡಿನ ಹಿರಿಯ ಸಾಹಿತಿ ನವೋದಯ ಮತ್ತು ನವ್ಯದ ಕೊಂಡಿಯಂತೆ ಚನ್ನವೀರ ಕಣವಿ ಅವರು ಸಾಹಿತ್ಯ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ
Advertisement
Advertisement
ಬೇಂದ್ರೆ, ಕುವೆಂಪು, ಪು.ತಿ.ನ ಮೊದಲಾದವರು ಹೊಸದಾಗಿ ಕಾವ್ಯ ರಚನೆಗೆ ತೊಡಗುವವರನ್ನು ಗಾಢವಾಗಿ ಪ್ರಭಾವಿಸುತ್ತಿದ್ದ ಕಾಲದಲ್ಲಿ ಚನ್ನವೀರ ಕಣವಿಯವರು ಬರವಣಿಗೆಯಲ್ಲಿ ತೊಡಗಿದ್ದರು. ನವೋದಯ ನಡುಹಗಲ ಕಾಲದಲ್ಲಿ ಕವಿಯಾಗಿ ಕಣವಿ ಪ್ರಕಟವಾಗಿದ್ದರು. ನವ್ಯ ಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ, ಸಾಮಾಜಿಕ ಎಚ್ಚರ, ವ್ಯಂಗ್ಯ ವಿಡಂಬನೆಗಳ ಬಗ್ಗೆ ಕಣವಿ ಅವರು ಬರೆದಿದ್ದರೂ ಅವರ ವ್ಯಕ್ತಿತ್ವದ ಮೂಲದ್ಯವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಠಿ, ಮಾನವೀಯತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಅವರು ತಮ್ಮ ಬರವಣಿಗೆಯಲ್ಲಿ ಬಿಟ್ಟು ಕೊಟ್ಟಿರಲಿಲ್ಲ. ಇದನ್ನೂ ಓದಿ: ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ವಿಧಿವಶ
Advertisement
ಗೀತ ಮಾಧುರಿಯಲ್ಲಿ ಚನ್ನವೀರ ಕಣವಿ ಕವಿ ಮತ್ತು ಕವನ ದೃಶ್ಯಿಕರಿಸಿದ್ದು ನನಗೆ ಸದಾ ಸ್ಪೂರ್ತಿಧಾಯಿ. ನನಗೆ ನಿರಂತರ ಪ್ರೇರಣೆಯಾಗಿರುವ ಕವಿ ಕಣವಿ ಅವರಿಗೆ ನಮ್ಮ ನುಡಿ ನಮನಗಳು ಎಂದು ಟಿ.ಎಸ್.ನಾಗಾಭರಣ ತಿಳಿಸಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಗೌರವ, 65ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಗೌರವ, ಆಳ್ವಾಸ್-ನುಡಿಸಿರಿ ಸಮ್ಮೇಳನಾಧ್ಯಕ್ಷರ ಗೌರವಗಳಿಗೆ ಭಾಜನರಾಗಿದ್ದ ಚನ್ನವೀರ ಕಣವಿ ಅವರ ನಿಧನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಟಿ.ಎಸ್.ನಾಗಾಭರಣ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿ ಕಂಬನಿ:
ನಾಡೋಜ ಚನ್ನವೀರ ಕಣವಿ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕಂಬನಿ ಮಿಡಿದಿದ್ದಾರೆ. ಆಧುನಿಕ ಕನ್ನಡ ಕಾವ್ಯದ ಮೇರು ಪ್ರತಿಭೆಗಳಲ್ಲಿ ಒಬ್ಬರು, ಹೊಂಬೆಳಕಿನ ಕವಿ, ಸುನೀತಗಳ ಸಾಮ್ರಾಟರೆಂದೇ ಕನ್ನಡಿಗರ ಮನಸ್ಸುಗಳಲ್ಲಿ ತುಂಬಿಹೋಗಿರುವ ನಾಡೋಜ ಚನ್ನವೀರ ಕಣವಿ ಅವರ ನಿಧನದ ಸುದ್ದಿ ಕೇಳಿ ಆಘಾತ ಉಂಟಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಣವಿ ಅವರು ಚೇತರಿಸಿಕೊಂಡು ಕ್ಷೇಮವಾಗಿ ಮನೆಗೆ ಮರಳುತ್ತಾರೆಂಬ ನಮ್ಮೆಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಅಗಲಿದ್ದಾರೆ. ಅವರಿಲ್ಲದಿರುವಿಕೆ ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿ ಮಾಡಿದೆ ಎನ್ನುವುದು ನನ್ನ ಅಭಿಪ್ರಾಯ.
“ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ ದೂರದ ಕಡಲಿಗೆ
ಮುಳುಗಿದಂತೆ ದಿನ ಬೆಳಗಿದಂತೆ
ಹೊರ ಬರುವನು ಕೂಸಿನ ಹಾಗೆ”
ಇಂಥ ಅನನ್ಯ ಕಾವ್ಯ ರಚಿಸಿದ ಅವರು ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಕುಟುಂಬದವರು, ನಾಡಿನ ಜನರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.