ಬೆಂಗಳೂರು: ನಾಕುಮುಖ ಚಿತ್ರ ಈಗೊಂದಷ್ಟು ಕಾಲದಿಂದ ಸದಾ ಸುದ್ದಿಯಾಗುತ್ತಿದೆ. ಹೊಸಬರ ತಂಡ ತಮ್ಮ ಕ್ರಿಯಾಶೀಲ ಕೆಲಸ ಕಾರ್ಯಗಳಿಂದಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ ಬಂದಿದೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿರೋ ನಾಕುಮುಖದ ಟ್ರೈಲರ್ ಬಿಡುಗಡೆಯಾಗಿದೆ. ಇದಾಗಿ ಸ್ವಲ್ಪವೇ ಸಮಯದಲ್ಲಿ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುವ ಮೂಲಕ ಈ ಹೊಸಬರ ತಂಡಕ್ಕೆ ತುಂಬು ಭರವಸೆ ತುಂಬಿದೆ. ಹಾರರ್ ಥ್ರಿಲ್ಲರ್ ಕಥೆಯ ಸುಳಿವಿನೊಂದಿಗೆ ಲಗ್ಗೆಯಿಟ್ಟಿರೋ ಈ ಟ್ರೇಲರ್ ಈಗ ನಾನಾ ದಿಕ್ಕಿನಲ್ಲಿ ಚರ್ಚೆ ಹುಟ್ಟು ಹಾಕಿದೆ.
ಇದು ಕುಶಾನ್ ಗೌಡ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ನಾಕುಮುಖ ಎಂಬುದು ಕೇವಲ ಕುಶಾನ್ ಗೌಡ ಮಾತ್ರವಲ್ಲದೇ ಚಿತ್ರತಂಡದ ಬಹುತೇಕರಿಗೆ ಇದು ಮೊದಲ ಹೆಜ್ಜೆ. ದರ್ಶನ್ ರಾಘವಯ್ಯ ನಾಯಕ ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಮೃತಾ ಅಯ್ಯಂಗಾರ್, ಪದ್ಮಾ ಶಿವಮೊಗ್ಗ, ಶಂಕರ್ ಭಟ್, ಅವಿಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಲಾಂಚ್ ಆಗಿರೋ ಟ್ರೇಲರ್ ಒಟ್ಟಾರೆ ಕಥೆಯ ಹೊಸತನ, ನಿಗೂಢತೆಗಳನ್ನು ಪರಿಣಾಮಕಾರಿಯಾಗಿ ದಾಟಿಸುತ್ತಲೇ ನಾಕುಮುಖದ ಸುತ್ತ ಕುತೂಹಲದ ನಾಕಾಬಂಧಿ ಹಾಕುವಂತೆ ಮಾಡುವಲ್ಲಿಯೂ ಯಶ ಕಂಡಿದೆ.
ಓರ್ವ ಪತ್ರಕರ್ತ ಮತ್ತು ಪೊಲೀಸ್ ನಿಗೂಢ ಕೊಲೆ ಪ್ರಕರಣವೊಂದನ್ನು ಬೆಂಬಿದ್ದು ಹೊರಡೋ ರೋಚಕ ಕಥೆ ನಾಕುಮುಖದ್ದು. ಆದರೆ ಇಲ್ಲಿನ ಕಥೆಯ ನಾನಾ ಮುಖಗಳನ್ನು ಈ ಕ್ಷಣಕ್ಕೂ ಚಿತ್ರತಂಡ ನಿಗೂಢವಾಗಿಟ್ಟಿದೆ. ಇದಕ್ಕೆ ಹಾರರ್ ಟಚ್ ಕೂಡಾ ಇದೆಯಂತೆ. ಪ್ರೆಸ್, ಪೊಲೀಸ್, ರಾಜಕೀಯ ಮತ್ತು ಫ್ಯಾಮಿಲಿ ಚಿತ್ರಣ ಕಥೆಯಲ್ಲಿರೋದರಿಂದಲೇ ಇದಕ್ಕೆ ನಾಕುಮುಖ ಎಂಬ ನಾಮಕರಣ ಮಾಡಲಾಗಿದೆಯಂತೆ.
ನಾಯಕನಾಗಿಯೂ ನಟಿಸಿರುವ ದರ್ಶನ್ ರಾಘವಯ್ಯ ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಇನ್ನು ನಿರ್ದೇಶಕರಂತೂ ಹೊಸಬರೆಂಬ ಸುಳಿವೇ ಕೊಡದಂತೆ ನಾಕುಮುಖವನ್ನು ಶೃಂಗಾರ ಮಾಡಿ ಸಿದ್ಧಗೊಳಿಸಿದ್ದಾರೆಂಬ ಮೆಚ್ಚುಗೆ ಎಲ್ಲೆಡೆಯಿಂದ ಕೇಳಿ ಬರಲಾರಂಭಿಸಿದೆ. ಈಗ ಕನ್ನಡ ಚಿತ್ರರಂಗದಲ್ಲಿ ಹೊಸಾ ಅಲೆಯ, ಹೊಸ ಪ್ರಯೋಗದ ಚಿತ್ರಗಳ ಭರಾಟೆ ಆರಂಭವಾಗಿದೆಯಲ್ಲಾ? ಆ ಸಾಲಿನಲ್ಲಿ ನಾಕುಮುಖವೂ ಸೇರಿಕೊಳ್ಳೋದು ಖಚಿತ. ಇಂಥಾ ಹೊಸಬರ ತಂಡ ಯಾವ ಜಾನರಿನ ಚಿತ್ರಕ್ಕಾದರೂ ಹೊಸ ಸ್ಪರ್ಶವನ್ನೇ ನೀಡಿ ರೂಪಿಸುತ್ತಾರೆಂಬ ನಂಬಿಕೆ ಪ್ರೇಕ್ಷಕರಲ್ಲಿದೆ. ಈ ಚಿತ್ರವೂ ಅದಕ್ಕೆ ತಕ್ಕುದಾಗಿ ಮೂಡಿ ಬಂದಿದೆ ಅನ್ನೋದಕ್ಕೆ ಈ ಟ್ರೈಲರ್ ಸಾಕ್ಷಿಯಂತೆ ಮೂಡಿ ಬಂದಿದೆ.