ಬೆಂಗಳೂರು: ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್ (NAAC) ಹರ್ಯಾಣದಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ (Al-Falah University) ಶೋಕಾಸ್ ನೋಟಿಸ್ (Show Cause) ಜಾರಿ ಮಾಡಿದೆ.
ಅವಧಿ ಮುಗಿದಿದ್ದರೂ ವೆಬ್‌ಸೈಟ್‌ನಲ್ಲಿ ಎರಡು ಕಾಲೇಜುಗಳಿಗೆ NAAC ಮಾನ್ಯತೆ ಸ್ಥಿತಿಯನ್ನು ಪ್ರದರ್ಶಿಸಿ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಿದ್ದು ಯಾಕೆ ಎಂದು ಕಾರಣ ಕೇಳಿ ನೋಟಿಸ್ ಕೇಳಿದೆ.
ನವೆಂಬರ್ 10 ರಂದು ನವದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣದಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯರು ಭಾಗಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಕ್ 7 ದಿನದ ಒಳಗಡೆ ಉತ್ತರ ನೀಡಬೇಕೆಂದು ನೋಟಿಸ್‌ನಲ್ಲಿ ಸೂಚಿಸಿದೆ.
ನೋಟಿಸ್‌ನಲ್ಲಿ ಏನಿದೆ?
ಅಲ್-ಫಲಾಹ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಮಾನ್ಯತೆ ಮಾರ್ಚ್ 22, 2018 ರಂದು ಕೊನೆಯಾಗಿದ್ದರೆ ಅಲ್-ಫಲಾಹ್ ಸ್ಕೂಲ್ ಆಫ್ ಎಜುಕೇಶನ್ ಅಂಡ್ ಟ್ರೈನಿಂಗ್ ಮಾನ್ಯತೆ ಮಾರ್ಚ್ 26, 2016 ಕ್ಕೆ ಮುಕ್ತಾಯವಾಗಿದೆ. ಮಾನ್ಯತೆ ಅವಧಿ ಮುಕ್ತಾಯವಾಗಿದ್ದರೂ ಇಲ್ಲಿಯವರೆಗೆ ನವೀಕರಿಸಲು ಯಾರು ಬಂದಿಲ್ಲ. ನವೀಕರಿಸದೇ ವೆಬ್‌ಸೈಟ್‌ನಲ್ಲಿ ಮಾನ್ಯತೆ ಸಿಕ್ಕಿದೆ ಎಂದು ತೋರಿಸಿ ಪೋಷಕರು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗಿದೆ. ಹೀಗಾಗಿ ಯಾಕೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಾರದು? UGC ಯ ಸೆಕ್ಷನ್ 2(f) ಮತ್ತು 12B ಅಡಿಯಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಹಿಂಪಡೆಯಲು NAAC ಯುಜಿಸಿಗೆ ಏಕೆ ಶಿಫಾರಸು ಮಾಡಬಾರದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ನೀಡುವಂತೆ ಸೂಚಿಸಿದೆ.



