-ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆ ಇಲ್ಲ
ಬೆಂಗಳೂರು: ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಕವಡೆ ಕಾಸಿನ ಬೆಲೆಯೂ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ (N.Ravikumar) ಆರೋಪಿಸಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಭದ್ರಾವತಿಯಲ್ಲಿ (Bhadravati) ಭೂ ಮತ್ತು ಗಣಿ ವಿಜ್ಞಾನ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳಾ ಅಧಿಕಾರಿ ಜ್ಯೋತಿಯವರಿಗೆ ಶಾಸಕ ಸಂಗಮೇಶ್ (MLA Sangamesh) ಅವರ ಪುತ್ರ ಬಸವೇಶ್ ಎಂಬವರು ಅತ್ಯಂತ ಕೆಳಮಟ್ಟದ ಭಾಷೆ ಉಪಯೋಗಿಸಿ ಬೈದಿದ್ದಾರೆ. ಆ ಭಾಷೆ ಉಪಯೋಗಿಸಲು ನನಗೂ ನಾಚಿಕೆ ಆಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
Advertisement
Advertisement
ಸಿದ್ದರಾಮಯ್ಯನವರು ಬಸವೇಶ್ ಅವರನ್ನು ಬಂಧಿಸಲು ಸೂಚಿಸಿ ಕಠಿಣ ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಬೇಕು. ಇದುವರೆಗೆ ಯಾಕೆ ಅವರನ್ನು ಬಂಧಿಸಿಲ್ಲ? ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ? ಮಹಿಳೆಯರಿಗೆ ಹೇಗೆ ಬೇಕೋ ಹಾಗೆ ಬೈಯ್ಯುವುದೇ? ರಾಜ್ಯದಲ್ಲಿ ಏನು ನಡೆಯುತ್ತಿದೆ. ಸಿದ್ದರಾಮಯ್ಯರಂಥ ಒಬ್ಬ ಸಮರ್ಥ ಮುಖ್ಯಮಂತ್ರಿ ರಾಜ್ಯದಲ್ಲಿ ಇದ್ದರೂ ಕೂಡ ಹೀಗಾಗುತ್ತಿದೆ. ಎರಡನೇ ಬಾರಿ ಸಿಎಂ ಆದ ಬಳಿಕ ಅವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಟೀಕಿಸಿದ್ದಾರೆ.
Advertisement
ಇಷ್ಟೊಂದು ದಾದಾಗಿರಿ, ಗೂಂಡಾಗಿರಿ ರಾಜ್ಯದಲ್ಲಿ ನಡೆಯುತ್ತಿದೆ. ರಾತ್ರಿ ಅಕ್ರಮವಾಗಿ ಮರಳುದಂಧೆ ತಡೆಗಟ್ಟಲು ಹೋದ ಅಧಿಕಾರಿಗೆ ಸಂಗಮೇಶರ ಸುಪುತ್ರ ಇಷ್ಟೊಂದು ದಾದಾಗಿರಿ, ಗೂಂಡಾಗಿರಿ ಮಾಡಿದ್ದಾರೆ. ಜ್ಯೋತಿಯವರು ರಾತ್ರಿ ಅಕ್ರಮವಾಗಿ ಮರಳುದಂಧೆ ಮಾಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಲು ಹೋಗಿದ್ದರು. ಮರಳು ದಂಧೆಗೆ ಬೆಂಬಲ ನೀಡುವ ಶಾಸಕ ಮತ್ತು ಅವರ ಪುತ್ರನ ಮೇಲೆ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರಾಮಾಣಿಕ ಅಧಿಕಾರಿಯನ್ನು ಬೆಂಬಲಿಸಬೇಕಾದ ಸರ್ಕಾರ, ಇವರನ್ನು ಯಾಕೆ ಬಂಧಿಸಿಲ್ಲ? ರಾಜ್ಯದಲ್ಲಿ ಏನು ನಡೆಯುತ್ತಿದೆ? ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಭದ್ರಾವತಿಯಲ್ಲಿ ಅಕ್ರಮವಾಗಿ ಮರಳುದಂಧೆ ತಡೆಗಟ್ಟಲು ಹೋದ ಅಧಿಕಾರಿಗೆ ಹಿಗ್ಗಾಮುಗ್ಗಾ ಬೈದಿದ್ದಾರೆ. ಸ್ವಲ್ಪವೂ ಗೌರವ, ಮರ್ಯಾದೆ ಕೊಡದೆ ಬೈದಿದ್ದಾರೆ. ಈ ಕೇಸನ್ನು ದುರ್ಬಲಗೊಳಿಸಲು ಎಸ್‍ಸಿಗೆ ಬೈದಿದ್ದಾಗಿ ಜ್ಯೋತಿಯವರ ಮೇಲೆ ಅಟ್ರಾಸಿಟಿ ಕೇಸನ್ನು ಹಾಕಲು ಸಂಚು ಮಾಡಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದಾರೆ.
ಇವತ್ತು ಭದ್ರಾವತಿ, ಶಿವಮೊಗ್ಗದಲ್ಲಿ ಸೇರಿ ವಿವಿಧ ಕಡೆ ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಮಹಿಳೆಯರಿಗೆ ಮತ್ತೆ ಮತ್ತೆ ಸುರಕ್ಷತೆಯ ಪ್ರಶ್ನೆ ನಮ್ಮ ರಾಜ್ಯದಲ್ಲಿ ಬಂದೊದಗಿದೆ. ಸಿದ್ದರಾಮಯ್ಯನವರೇ, ನನಗೆ ಆಡಳಿತ ನಡೆಸಲು ಆಗುವುದಿಲ್ಲ ಎಂದು ಹೇಳಿಬಿಡಿ; ಭ್ರಷ್ಟಾಚಾರ ತಡೆಯಲು ಆಗುವುದಿಲ್ಲ ಎಂದು ತಿಳಿಸಿ, ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ ಎಂದು ಹೇಳಿಬಿಡಿ. ಅಧಿಕಾರಿಗಳು ಬೇರೆ ದಾರಿಯನ್ನಾದರೂ ಹುಡುಕಿಕೊಳ್ಳುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.