Connect with us

Bengaluru City

ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನ-ಸಚಿವ ಸ್ಥಾನಕ್ಕೆ ಎನ್. ಮಹೇಶ್ ರಾಜೀನಾಮೆ

Published

on

ಬೆಂಗಳೂರು: ಮೈತ್ರಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು, ಎನ್. ಮಹೇಶ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ. ಮೈತ್ರಿ ಸರ್ಕಾರ ರಚನೆಯಾದ ಕೇವಲ ನಾಲ್ಕು ತಿಂಗಳಲ್ಲಿಯೇ ದೋಸ್ತಿ ಸರ್ಕಾರದ ಮೊದಲ ವಿಕೆಟ್ ಪತನವಾಗಿದ್ದು, ಎನ್. ಮಹೇಶ್ ಆಪರೇಷನ್ ಕಮಲಕ್ಕೆ ಒಳಗಾದ್ರ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಹುಟ್ಟಿಕೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಮಹೇಶ್, ನಾನು ನನ್ನ ಕ್ಷೇತ್ರಗಳಿಗೆ ಭೇಟಿ ಆಗೋದಕ್ಕೆ ಸಮಯ ಸಿಗುತ್ತಿಲ್ಲ. ಹಾಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಲಿದ್ದೇನೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದ ಮಾನ್ಯ ಸಿಎಂ ಕುಮಾರಸ್ವಾಮಿ ಅವರ ಧನ್ಯವಾದ ತಿಳಿಸುತ್ತೇನೆ. ಮುಂದೆ ಸರ್ಕಾರದ ಭಾಗವಾಗಿ ಇರಲ್ಲ, ಕೇವಲ ಕುಮಾರಸ್ವಾಮಿ ನೇತೃತ್ವ ಸರ್ಕಾರದ ಬೆಂಬಲಿಗನಾಗಿ ಇರುತ್ತೇನೆ. ನನ್ನ ಸಂಪೂರ್ಣ ಕುಮಾರಸ್ವಾಮಿ ಅವರಿಗಿದ್ದು, ಉಪ ಚುನಾವಣೆಯಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಎನ್.ಮಹೇಶ್, ಕಾಂಗ್ರೆಸ್ ವಿರುದ್ಧವೇ ಮಾತನಾಡಿದ್ದರು. ಮಹೇಶ್ ಹೇಳಿಕೆಗೆ ಸಹಜವಾಗಿಯೇ ಎಲ್ಲ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದ್ದರು. ಇದರಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮಹಾಘಟಬಂಧನ್ ಗೆ ಬಿಎಸ್‍ಪಿ ಹಿಂದೆ ಸರಿಯುವ ಮುನ್ಸೂಚನೆ ನೀಡಿದೆ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳ ಜೊತೆ ಸೇರಿ ಕಾಂಗ್ರೆಸ್ ಮುನ್ನುಡಿ ಬರೆದಿತ್ತು. ಆದ್ರೆ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಸಹ ಮಹಾಘಟಬಂಧನ್ ದಿಂದ ದೂರ ಉಳಿದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂಬುದರ ಬಗ್ಗೆ ಸುಳಿವು ನೀಡಿದ್ದರು.

ಇಂದು ಮಧ್ಯಾಹ್ನ ಬಿಜೆಪಿ ನಾಯಕ ಆರ್.ಅಶೋಕ್, ಯಾವ ಮನುಷ್ಯನಿಗೆ ಕನಸು ಇರುತ್ತೆ, ಅವನು ಗುರಿಯನ್ನು ಸಾಧಿಸುವುದು ಮುಖ್ಯ. ಅಂತೇ ನಾವು ಸರ್ಕಾರ ರಚನೆ ಮಾಡುವುದು ಶತಸಿದ್ಧ. 104 ಸ್ಥಾನಗಳನ್ನ ನೀಡುವ ಮೂಲಕ ಜನರು ನಮಗೆ ಬೆಂಬಲ ನೀಡಿದ್ದಾರೆ. 38 ಸ್ಥಾನ ಬಂದಿರುವ ಜೆಡಿಎಸ್ ಪಕ್ಷ ಎಚ್‍ಡಿ ಕುಮಾರಸ್ವಾಮಿ ಅವರು ಸಿಎಂ ಆದರೆ 104 ಸ್ಥಾನ ಪಡೆದಿರುವ ಬಿಎಸ್‍ವೈ ಏಕೆ ಸಿಎಂ ಆಗಬಾರದು. ನಾವೇನು ರಾಜಕೀಯ ಸನ್ಯಾಸಿಗಳಾ? ಪ್ರತಿಯೊಂದು ಎಂಎಲ್‍ಎ ಸ್ಥಾನ ಮುಖ್ಯ ಅಂತಾ ಹೇಳಿದ್ದರು.

ಈ ಹಿಂದೆ ಕಾಂಗ್ರೆಸ್ ವಿರುದ್ಧ ಕಿಡಿ:
ಜಾತಿ ವ್ಯವಸ್ಥೆ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಬಿಜೆಪಿ, ಕಾಂಗ್ರೆಸ್, ಜನತಾದಳ ಅಸ್ತಿತ್ವದಲ್ಲಿರುತ್ತವೆ. ಜಾತಿ ವ್ಯವಸ್ಥೆ ಅಸಮಾನತೆ ಯಾವತ್ತು ಕೊನೆಗೊಳ್ಳುತ್ತದೋ ಆ ದಿನ ಬಸವಣ್ಣನ ಪಕ್ಷವಾದ ಬಹುಜನ ಸಮಾಜವಾದಿ ಪಾರ್ಟಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಹೆಚ್ಚು ಕಾಲ ನಮ್ಮ ದೇಶವನ್ನು ಆಳ್ವಿಕೆ ಮಾಡಿದೆ. ದೇಶದ ನೂರು ಕೋಟಿ ಜನರನ್ನು ಸಾಮಾಜಿಕ ಆರ್ಥಿಕ ಸಂಕಷ್ಟದಿಂದ ಬಿಡುಗಡೆ ಮಾಡುವಂತಹ ಧ್ಯೇಯ ಕಾಂಗ್ರೆಸ್ಸಿಗೆ ಇದ್ದಿದ್ದರೆ ಇಷ್ಟೊತ್ತಿಗೆ ಭಾರತದಲ್ಲಿ ಎಲ್ಲರೂ ಸಮಾನತೆಯಿಂದ ಇರುತ್ತಿದ್ದರು ಎಂದು ಬಹಿರಂಗವಾಗಿಯೇ ಕಿಡಿಕಾರಿದ್ದರು.

ಆರ್.ಅಶೋಕ್ ಹೇಳಿಕೆ ಬೆನ್ನಲ್ಲೇ ಎನ್.ಮಹೇಶ್ ರಾಜೀನಾಮೆ ನೀಡಿರುವುದು ‘ಆಪರೇಷನ್ ಕಮಲ’ಕ್ಕೆ ಒಳಗಾದ್ರಾ ಎಂಬ ಗೊಂದಲ ಹುಟ್ಟುಕೊಂಡಿದೆ. ಎನ್.ಮಹೇಶ್ ಅವರ ರಾಜೀನಾಮೆ ನೀಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಂದೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

 

Click to comment

Leave a Reply

Your email address will not be published. Required fields are marked *