– ಮೋದಿ ಗೆಲುವು ಪಡೆದರೆ ಮತ್ತೆ ಚುನಾವಣೆ ನಡೆಯಲ್ಲ
– ಕೇಂದ್ರ ಸಂಸ್ಥೆಗಳ ದುರುಪಯೋಗ
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ ಮಂಡ್ಯ ಕ್ಷೇತ್ರದಲ್ಲಿ ಇಂದು ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ನಿಖಿಲ್ ಪರ ಮತಯಾಚನೆ ಮಾಡಿದರು. ಈ ವೇಳೆ ಕನ್ನಡಲ್ಲೇ ಭಾಷಣ ಆರಂಭಿಸಿ ನೆರೆದಿದ್ದ ಕಾರ್ಯಕರ್ತರಿಗೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಲೊಕಸಭಾ ಚುನಾವಣೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರು ಸೋಲುವುದು ಖಚಿತವಾಗಿದ್ದು, ಗುಜರಾತ್‍ಗೆ ಮರಳಿ ಹಿಂದಿರುಗಲಿದ್ದಾರೆ. ದಕ್ಷಿಣ ಭಾರತ ಜನತೆಗೆ ದೇವೇಗೌಡರು ಹಿರಿಯರಾಗಿದ್ದು, ಅವರೊಂದಿಗೆ ಕೆಲಸ ಮಾಡಲು 1995ರಲ್ಲಿ ನನಗೆ ಅವಕಾಶ ಲಭಿಸಿತ್ತು. ಆ ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಿ ಅವರು ದೇಶಕ್ಕಾಗಿ ಪ್ರಧಾನಿಯಾದರು. ಅಂದು ಕೂಡ ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ದೇವೇಗೌಡ ಅವರಿಗೆ ಅವಕಾಶ ನೀಡಲಾಯಿತು ಎಂದು ತಿಳಿಸಿದರು.
ಮಣ್ಣಿನ ಮಗ ಆಗಿರುವ ದೇವೇಗೌಡರು ಸತತ 24 ಗಂಟೆ ರೈತರ ಅಭಿವೃದ್ಧಿಗಾಗಿ ಕೆಲಸ ಮಾಡಲು ಚಿಂತನೆ ನಡೆಸುತ್ತಾರೆ. ಅವರ ನಾಯಕತ್ವದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟ. ಪ್ರಜಾಪ್ರಭುತ್ವ ಉಳಿಯ ಬೇಕಾದರೆ ಮೋದಿ ಮನೆಗೆ ಹೋಗಬೇಕು. ನೋಟು ನಿಷೇಧ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಪೆಟ್ಟು ಕೊಟ್ಟಿದ್ದಾರೆ. ನಿರುದ್ಯೋಗ, ಕೃಷಿ ವಲಯದಲ್ಲಿ ಸಮಸ್ಯೆ ಹೆಚ್ಚಾಗಿದೆ. ಅಲ್ಲದೇ 2 ಸಾವಿರ ನೋಟು ಜಾರಿ ಮಾಡಿ ಭ್ರಷ್ಟಾಚಾರವನ್ನು ಹೆಚ್ಚು ಮಾಡಿದ್ದಾರೆ. ಮೋದಿ, ಅಮಿತ್ ಶಾ ದೇಶದ ಅತಿದೊಡ್ಡ ಭ್ರಷ್ಟರಾಗಿದ್ದು, ಅವರಿಗೆ ವಿರೋಧಿಗಳ ವಿರುದ್ಧ ಆರೋಪ ಮಾಡುವೆ ಕೆಲಸ ಆಗಿದೆ ಎಂದರು.
ದೇಶದ ರಕ್ಷಣೆಯಲ್ಲೂ ರಾಜಿ ಮಾಡಿ ರಫೇಲ್ ಹಗರಣ ಮಾಡಿದ್ದಾರೆ. ಕೇಂದ್ರ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಐಟಿ, ಇಡಿ ದಾಳಿ ನಡೆಸಲಾಗಿದೆ. ಚುನಾವಣಾ ಆಯೋಗ ಕೂಡ ಕೇಂದ್ರ ಸರ್ಕಾರ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಮಾಹಿತಿ ತಂತ್ರಜ್ಞಾನದಲ್ಲಿ ಮುಂದಿದ್ದು, ನಾವು ಇವಿಎಂ ವಿರುದ್ಧ ಹೋರಾಟ ನಡೆಸಿದ್ದೇವೆ. ನಿನ್ನೆ ಕೂಡ ಚುನಾವಣಾ ಆಯೋಗಕ್ಕೆ ಈ ಬಗ್ಗೆ ಮನವಿ ಮಾಡಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಮತ್ತೊಮ್ಮೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಶೇ. 50 ರಷ್ಟು ಇವಿಎಂಗಳನ್ನು ತಾಳೆ ನೋಡಿ ಪರೀಕ್ಷೆ ಮಾಡಲು ಮನವಿ ಮಾಡುತ್ತೇವೆ. ಈ ಬಗ್ಗೆ ನೀವು ಬೆಂಬಲ ನೀಡಬೇಕು ಎಂದರು.
ಇದೇ ವೇಳೆ ಮೋದಿ ಅವರಿಗೆ ಉತ್ತರ ನೀಡುವಂತೆ ಕೆಲ ಸವಾಲುಗಳನ್ನು ಎಸೆದ ಅವರು, ದೇಶದಲ್ಲಿ 40 ವರ್ಷದಲ್ಲಿ ಮೊದಲ ಬಾರಿಗೆ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು ಇದಕ್ಕೆ ನಿಮ್ಮ ಉತ್ತರ ಏನು? ದೇಶದಲ್ಲಿ ವಾಯಮಾಲಿನ್ಯ ಹೆಚ್ಚಾಗಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಗುಂಪು ಗಲಭೆಗಳು ಹೆಚ್ಚಾಗಿದ್ದು, ಭಾರತ ರೂಪಾಯಿ ಬೆಲೆ ಕೂಡ ನಷ್ಟಕ್ಕೆ ಕಾರಣವಾಗಿದೆ. ಪರಿಸರ ರಕ್ಷಣೆಯಲ್ಲೂ ದೇಶ ಹಿಂದುಳಿದಿದೆ. ಈ ಎಲ್ಲಾ ಅಂಶಗಳು ನನ್ನ ಆರೋಪಗಳಲ್ಲ ಕೆಲ ವರದಿಗಳ ಅಂಕಿ ಅಂಶಗಳು. ಇದುವರೆಗೂ ಒಂದು ಪತ್ರಿಕಾಗೋಷ್ಠಿ ನಡೆಸಿದ ನೀವು ಈ ಬಗ್ಗೆ ಉತ್ತರಿಸಿ ಎಂದು ಸವಾಲು ಎಸೆದರು.
ಕುಮಾರಸ್ವಾಮಿ ಅವರು ವಿಷನ್ ಇರುವ ನಾಯಕರಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಿದ್ದಾರೆ. ದೇಶಕ್ಕೆ ಯುವ ನಾಯಕರ ಅಗತ್ಯ ಇದ್ದು, ನಿಖಿಲ್ ವಿರುದ್ಧ ನಿಂತಿರುವ ಅಭ್ಯರ್ಥಿಗೆ ಹಿಂಬಾಗಿಲಿನಿಂದ ಬಿಜೆಪಿ ಬೆಂಬಲ ನೀಡಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಈ ಸಮಯದಲ್ಲಿ ಚಿಂತನೆ ಮಾಡಿ ಮತ ನೀಡಬೇಕು. 2019ರ ಚುನಾವಣೆ ಬಹುಮುಖ್ಯವಾಗಿದ್ದು ಈ ಬಾರಿ ಮೋದಿ ಸೋಲದಿದ್ದರೆ ಮುಂದಿನ ಬಾರಿ ಚುನಾವಣೆಯೇ ನಡೆಸಲು ಅವರು ಅವಕಾಶ ನೀಡಲ್ಲ. ಸದ್ಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕಳೆದ 5 ವರ್ಷಗಳಲ್ಲಿ ಕರ್ನಾಟಕ, ಆಂಧ್ರಕ್ಕೆ ಸೇರಿದಂತೆ ದಕ್ಷಿಣದ ರಾಜ್ಯಗಳು ಸೇರಿ ಹಲವು ರಾಜ್ಯಗಳಿಗೆ ಮೋದಿ ಕೊಡುಗೆ ನೀಡಿಲ್ಲ. ಆದ್ದರಿಂದ ಈ ಬಾರಿ ಮೋದಿರನ್ನು ಸೋಲಿಸಿ ಎಂದು ಕರೆ ನೀಡಿದರು.
ವಿವಿ ಪ್ಯಾಟ್ ನಲ್ಲಿ ಮತ ಹಾಕಿದರೆ 7 ಸೆಕೆಂಡಿನಲ್ಲಿ ಮತಗಳು ಬದಲಾಗುತ್ತೆ. ಈ ಬಗ್ಗೆ ನಮಗೆ ಅನುಮಾನ ಇದ್ದು, ಇದನ್ನು ಪ್ರಶ್ನೆ ಮಾಡಿದರೆ ನಮ್ಮನ್ನು ದೇಶ ದ್ರೋಹಿಗಳು ಎನ್ನುತ್ತಾರೆ. ಪಾಕ್ ಪ್ರಧಾನಿ, ಮೋದಿ ಇಬ್ಬರು ಒಂದೇ. ದೇಶಕ್ಕೆ ಮೋದಿ ಮೋಸ ಮಾಡಿದ್ದಾರೆ. ಆದ್ದರಿಂದ ನಾನು ಅಮರಾವತಿಯಿಂದ ಬಂದು ಮನವಿ ಮಾಡುತ್ತಿದ್ದು, ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿ ಎಂದರು.