Connect with us

Districts

ತಂದೆಯಾಗುವ ಕುರಿತು ಪ್ರಶ್ನಿಸಿದ್ದಕ್ಕೆ ಮೈಸೂರು ಮಹಾರಾಜ ಯದುವೀರ್ ಹೀಗಂದ್ರು

Published

on

ಮೈಸೂರು: ವೈಯುಕ್ತಿಕ ಹಾಗೂ ಸಾರ್ವಜನಿಕ ಜೀವನದ ಬಗ್ಗೆ ಒಂದು ಗೆರೆ ಇಟ್ಟುಕೊಂಡಿದ್ದೇನೆ. ಆ ಗೆರೆಯನ್ನ ನಾನು ದಾಟುವುದಿಲ್ಲ, ನೀವು ದಾಟಬೇಡಿ ಅಂತಾ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಹೇಳಿದ್ದಾರೆ.

ನಗರದಲ್ಲಿ ಇಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ವೇಳೆ ತಂದೆಯಾಗುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಕಾರ ವ್ಯಕ್ತಪಡಿಸಿದ ಯದುವೀರ್, ಮೈಸೂರು ರಾಜಮನೆತನಕ್ಕೆ ಹೊಸ ಅತಿಥಿಯೊಬ್ಬರ ಸೇರ್ಪಡೆ ಎಂದಿದ್ದಕ್ಕೆ ನಕ್ಕು ಸುಮ್ಮನಾದರು. ಬಳಿಕ ಕೊಂಚ ನಾಚಿಕೆಯಿಂದಲೇ ಮಾತನಾಡಿದ ಯದುವೀರ್, ಇದು ನಮ್ಮ ವೈಯುಕ್ತಿಕ ವಿಚಾರ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ ನಮ್ಮ ವೈಯುಕ್ತಿಕ ವಿಷಯದ ಬಗ್ಗೆ ಮಾತನಾಡಲು ಬೇರೆ ಯಾರಿಗೂ ಅಧಿಕಾರವನ್ನು ಕೊಟ್ಟಿಲ್ಲ. ಈ ಬಗ್ಗೆ ಒಂದು ಗೆರೆ ಇಟ್ಟುಕೊಂಡಿದ್ದು ಅದನ್ನ ನಾನು ದಾಟೋಲ್ಲ ಎಂದು ಹೇಳಿದ್ರು.

ಆ ಮೂಲಕ ಅರಮನೆಯಲ್ಲಿನ ವೈಯುಕ್ತಿಕ ವಿಚಾರಗಳಿಗೆ ಮತ್ತೆ ನಮ್ಮನ್ನ ಪ್ರಶ್ನೆ ಮಾಡಬೇಡಿ ಅಂತ ಪರೋಕ್ಷವಾಗಿ ಪತ್ರಕರ್ತರಿಗೆ ತಾಕೀತು ಮಾಡಿದ ಯಧುವೀರ್ ತಂದೆಯಾಗುತ್ತಿರುವ ಪ್ರಶ್ನೆಗೆ ಉತ್ತರವನ್ನೆ ನೀಡದೆ ಮುನ್ನಡೆದರು.

ಶಾಲೆಯ ಅಭಿವೃದ್ಧಿ, ರಾಜಕೀಯಕ್ಕೆ ಬರಲ್ಲ: ಅರಮನೆ ಹಾಗೂ ಸಾರ್ವಜನಿಕರ ಸಂಬಂಧ ಮುಂದುವರೆಸಲು ಸಾರ್ವಜನಿಕರ ಜೀವನದಲ್ಲಿ ಕಾಣಿಸಿಕೊಳ್ತೇನೆ. ರಾಜಕೀಯಕ್ಕೆ ಬರಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ಕಲಿಸು ಫೌಂಡೇಶನ್ ನಿಂದ ಸರ್ಕಾರಿ ಶಾಲೆಗಳನ್ನ ಉನ್ನತಿಕರಣಗೊಳಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಯಧುವಂಶದ ಮಹಾರಾಜ ಯಧುವೀರ್ ಕೈಜೋಡಿಸಿದ್ದಾರೆ. ಹಿಂದೆಯೂ ವಿಶೇಷ ಅತಿಥಿ ಶಿಕ್ಷಕನಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಾಠಮಾಡಿದ್ದರು. ಇದೀಗ ಕಲಿಸು ಫೌಂಡೇಶನ್ ಈ ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹೆಬ್ಬಾಳಿನ ಕುಂಬಾರಕೊಪ್ಪಲಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು.

ಶಾಲೆಯಲ್ಲಿ ಗಿಡ ನೆಟ್ಟು, ಮಕ್ಕಳಿಗೆ ಪಾಠ ಮಾಡಿ ಸಂವಾದ ನಡೆಸಿದರು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಚಿಂತನೆ ನಡೆಸಿರುವ ಕಲಿಸು ಫೌಂಡೇಶನ್ ಮಹಾರಾಜ ಯಧುವೀರ್ ಅವರನ್ನೇ ಈ ಕಾರ್ಯಕ್ರಮಕ್ಕೆ ಅಂಬಾಸಿಡರ್ ಮಾಡಿದ್ದಾರೆ. ಇದರಿಂದ ಇಡೀ ಶೈಕ್ಷಣಿಕ ವರ್ಷ ಯಧುವೀರ್ ಹಲವು ಶಾಲೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿ, ಅಲ್ಲಿನ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಅಲ್ಲದೆ ಸರ್ಕಾರವು ಶಿಕ್ಷಣಕ್ಕೆ ಸಾಕಷ್ಟು ಹಣ ನೀಡಿದೆ. ಆದರೂ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿಲ್ಲ, ಇದಕ್ಕೆ ಸೂಕ್ತ ಕಾರಣ ಹುಡುಕಿ ಸಮಸ್ಯೆ ಬಗೆಹರಿಸಬೇಕು. ಈ ಕಾರಣಕ್ಕಾಗಿಯೇ ನಾನು ಇವರೊಂದಿಗೆ ಬಂದಿದ್ದೇನೆ. ಇದು ಪ್ರಚಾರಕ್ಕಲ್ಲ ನಿಜವಾಗಿಯೂ ನಾವು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕಿದೆ ಎಂದು ಯಧುವೀರ್ ಅಭಿಪ್ರಾಯಪಟ್ಟರು. ತಮ್ಮೊಂದಿಗೆ ಮಹಾರಾಜರು ಕೈಜೊಡಿಸಿದ್ದಕ್ಕೆ ಕಲಿಸು ಫೌಂಡೇಶನ್ ಸಂತಸ ವ್ಯಕ್ತಪಡಿಸಿದ್ದು ಇದರ ಸದ್ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದೆ.

Click to comment

Leave a Reply

Your email address will not be published. Required fields are marked *