Karnataka

ಮೈಸೂರಿನ ಮದುವೆ ಆಮಂತ್ರಣ ಪ್ರಧಾನಿ ಮೋದಿಯಿಂದ ವೈರಲಾಯ್ತು!

Published

on

Share this

– ಮಗಳ ಮದ್ವೆ ಕಾಗದದಲ್ಲಿ ಸ್ವಚ್ಛ ಭಾರತ ಲೋಗೋ ಪ್ರಿಂಟ್
– ಪ್ರಧಾನಿಯಿಂದ ಸಹೋದರನ ಟ್ವೀಟ್ ರೀಟ್ವೀಟ್

– ಅಶ್ವಥ್ ಸಂಪಾಜೆ
ಬೆಂಗಳೂರು: ನಿಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ದೇಶದ ಪ್ರಧಾನಿಯೇ ಮೆಚ್ಚಿದರೆ ನಿಮಗೆ ಹೇಗನಿಸುತ್ತೆ..? ಮೈಸೂರು ಮೂಲದ ಉದ್ಯಮಿಯೊಬ್ಬರ ಪುತ್ರಿಯ ವಿವಾಹದ ಆಮಂತ್ರಣ ಪತ್ರಿಕೆಯನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಮಾರು ಹೋಗಿದ್ದಾರೆ.

ಸ್ವಚ್ಛ ಭಾರತಕ್ಕೆ ಕೈ ಜೋಡಿಸುವ ವ್ಯಕ್ತಿಗಳನ್ನು ಆಗಾಗ ತಮ್ಮ ಮನ್‍ಕೀ ಬಾತ್‍ನಲ್ಲಿ ನೆನಪಿಸಿಕೊಳ್ಳುವ ಪ್ರಧಾನಿ ಮೋದಿ, ಇದೀಗ ಮೈಸೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಮದುವೆ ಕಾಗದವನ್ನು ಅದರೊಳಗಿನ ಸುಂದರ ಆಶಯಕ್ಕಾಗಿ ರೀ ಟ್ವೀಟ್ ಮಾಡಿದ್ದಾರೆ.

ಹೌದು, ಡಿ ದೇವರಾಜ್ ಅರಸ್ ರಸ್ತೆಯಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಆಕಾಶ್ ಅವರು ಸ್ವಚ್ಛ ಭಾರತ ಲೋಗೋ ಇರುವ ತಮ್ಮ ಸಹೋದರಿಯ ಮದುವೆ ಆಹ್ವಾನ ಪತ್ರಿಕೆಯನ್ನು ಏಪ್ರಿಲ್ 1 ರಂದು ಮೋದಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಮೋದಿ ಅವರು ಭಾನುವಾರ ಸಂಜೆ ರೀ ಟ್ವೀಟ್ ಮಾಡಿದ್ದು ಈಗ ವೈರಲ್ ಆಗಿದೆ.

ಸ್ವಚ್ಛ ಭಾರತದ ಲೋಗೋವನ್ನು ಪ್ರಕಟಿಸಿದ್ದು ಯಾಕೆ ಎಂದು ಪಬ್ಲಿಕ್ ಟಿವಿ ಕೇಳಿದ್ದಕ್ಕೆ, ನಾವು ಮೂಲತಃ ಗುಜರಾತ್‍ನವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದೇವೆ. ನನ್ನ ತಂದೆಯವರಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಬಹಳ ಇಷ್ಟವಾಗಿದೆ. ಏಪ್ರಿಲ್ 28 ರಂದು ರಾಜಸ್ಥಾನದ ಜೋದ್‍ಪುರದಲ್ಲಿ ನನ್ನ ಸಹೋದರಿಯ ಮದುವೆ ಇದೆ. ಈ ಮದುವೆಯ ಆಹ್ವಾನ ಪತ್ರಿಕೆಯಲ್ಲಿ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಏನಾದರೂ ಒಂದು ಉತ್ತಮ ಸಂದೇಶವನ್ನು ತಿಳಿಸುವ ಉದ್ದೇಶದಿಂದ ತಂದೆಯವರು ಸ್ವಚ್ಛ ಭಾರತದ ಲೋಗೋವನ್ನು ಪ್ರಿಂಟ್ ಹಾಕಿಸಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿಯವರ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಕುಟುಂಬ ನೆಲೆಸಿದೆ. ಹಿಂದಿನಿಂದಲೂ ನಾವು ಮೋದಿ ಅವರ ಕೆಲಸ ಕಾರ್ಯಗಳನ್ನು ನೋಡಿದ್ದೇವೆ. ನಮ್ಮ ಕುಟುಂಬ ಸದಸ್ಯರಿಗೆ ಮೋದಿ ಅಂದ್ರೆ ಅಚ್ಚುಮೆಚ್ಚು. ಈ ಹಿಂದೆ ನನ್ನ ತಂದೆ ಬಿಸಿನೆಸ್ ಮಾಡಲು ಮೈಸೂರಿಗೆ ಬಂದಿದ್ದರು. 12 ವರ್ಷ ಮೈಸೂರಿನಲ್ಲಿ ಇದ್ದು ಬಳಿಕ ಗುಜರಾತ್‍ಗೆ ಮರಳಿದ್ವಿ. ಇದಾದ ಬಳಿಕ 2009ರಲ್ಲಿ ಮೈಸೂರಿಗೆ ಪುನಃ ಬಂದು ಈಗ ಇಲ್ಲೇ ನೆಲೆಸಿದ್ದೇವೆ. ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರ್ ಪದವಿ ಓದಿದ್ದೇನೆ ಎಂದರು.

ಫಾಲೋ ಮಾಡಿದ್ರು: ಆಕಾಶ್ ಅವರ  ಟ್ವೀಟನ್ನು ಮೋದಿ ರೀಟ್ವೀಟ್ ಮಾಡಿದ್ದು ಮಾತ್ರ ಅಲ್ಲದೇ ಈಗ ಅವರನ್ನು ಫಾಲೋ ಮಾಡಿದ್ದಾರೆ. ಮೋದಿಯವರು ಇದುವರೆಗೆ ಒಟ್ಟು 1,698 ಜನರನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬನಾಗಿದ್ದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಆಕಾಶ್ ಸಂತಸ ಹಂಚಿಕೊಂಡಿದ್ದಾರೆ.

ಸಾಫ್ಟ್ ವೇರ್  ಎಂಜಿನಿಯರ್ ಆಗಿರುವ ಆಕಾಶ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉದ್ಯಮಿ, ಬ್ಲಾಗರ್, ಸೋಷಿಯಲ್ ಮೀಡಿಯಾ ಕನ್ಸಲ್ಟೆಂಟ್ ಎಂದು ತಮ್ಮ ವೃತ್ತಿ ವಿವರನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಧೋನಿ ಅಭಿಮಾನಿ ಮತ್ತು ನರೇಂದ್ರ ಮೋದಿಯವರು ಫಾಲೋ ಮಾಡುತ್ತಿರುವ ವ್ಯಕ್ತಿ ಎಂದು ತಮ್ಮ ಪ್ರೊಫೈಲ್‍ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್ ಟ್ವೀಟ್: ಸೋಮವಾರ ರಾತ್ರಿ ವೇಳೆಗೆ ಈ ಟ್ವಿಟನ್ನು 2,336 ಜನ ರೀ ಟ್ವೀಟ್ ಮಾಡಿದ್ರೆ, 7052 ಮಂದಿ ಲೈಕ್ ಮಾಡಿದ್ದಾರೆ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುರೇಶ್ ಪ್ರಭು, ಮೈಸೂರು ಸಂಸದ ಪ್ರತಾಪ್ ಸಿಂಹ, ಮಾಜಿ ರಕ್ಷಣಾ ಸಚಿವ ಹಾಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ರೀ ಟ್ವೀಟ್ ಮಾಡಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications