ಮಗಳಿಗೆ ಆಸ್ತಿ ಕೊಡಲೇಬೇಡಿ, ಸಾಯುವ ಹಿಂದಿನ ದಿನ ಸ್ನೇಹಿತರಿಗೆ GPay- ಕಿರಿಮಗಳ ಕೈಯಲ್ಲಿ ಡೆತ್‍ನೋಟ್ ಬರೆಸಿದ್ದ ತಂದೆ

Public TV
2 Min Read
Mysuru Suicide

ಮೈಸೂರು: ಮಗಳು ಪ್ರೀತಿಸಿದವನ (Love) ಜೊತೆ ಮನೆಬಿಟ್ಟು ಹೋಗಿದ್ದಕ್ಕೆ ಹೆಚ್‌ಡಿ ಕೋಟೆಯಲ್ಲಿ (HD Kote) ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.

ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಯುವತಿಯ ತಂದೆ ಮಹದೇವಸ್ವಾಮಿ ಕಿರಿಯ ಮಗಳ ಕೈಯಲ್ಲಿ 4 ಪುಟಗಳ ಡೆತ್‍ನೋಟ್ (Death) ಬರೆಸಿದ್ದು, ಕೆಲವು ವಿಚಾರಗಳನ್ನು ಅದರಲ್ಲಿ ದಾಖಲಿಸಿದ್ದಾರೆ. ಅದರಲ್ಲಿ ಹಿರಿಯ ಮಗಳು ಪ್ರೀತಿ ಮಾಡುತ್ತಿರುವ ಹುಡುಗನ ನಡವಳಿಕೆ ಸರಿ ಇಲ್ಲ. ಈ ಹಿಂದೆ ಅವನಿಗೆ ಲವ್ ಬ್ರೇಕಪ್ ಆಗಿತ್ತು. ಈ ಬಗ್ಗೆ ನಮ್ಮ ಮಗಳಿಗೆ ಎಷ್ಟೇ ಹೇಳಿದ್ರೂ, ನಮ್ಮ ಮಾತು ಕೇಳದೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವುದಾಗಿ ತಿಳಿಸಿದ್ದಳು. ಮರ್ಯಾದೆಗೆ ಅಂಜಿ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ

Mysuru HD Kote 3 Members Suicide

ಬೂದನೂರು ಗ್ರಾಮದಲ್ಲಿರುವ ಮನೆ, ಹೆಚ್‍ಡಿ ಕೋಟೆಯಲ್ಲಿರುವ ಮನೆ ಹಾಗೂ ಜಮೀನನ್ನು ನನ್ನ ತಮ್ಮನಿಗೆ ನೀಡಿ. ಮನೆಯಲ್ಲಿರುವ 2.5 ಲಕ್ಷ ರೂ. ಹಣವನ್ನು ನನ್ನ ಸಹೋದರನಿಗೆ ನೀಡಿ. ಯಾವುದೇ ಕಾರಣಕ್ಕೂ ನನ್ನ ಆಸ್ತಿ ನನ್ನ ಮಗಳಿಗೆ ಕೊಡಬೇಡಿ. ನಮ್ಮ ಶವಗಳನ್ನು ಹೂಳಬೇಡಿ, ಅಗ್ನಿಸ್ಪರ್ಶ ಮಾಡಿ ಎಂದು ಬರೆದಿದ್ದಾರೆ.

ಸಾಯುವ ಹಿಂದಿನ ಯಾರಿಗೆಲ್ಲ ಹಣ ಕೊಡಬೇಕು ಅವರಿಗೆ ಖುದ್ದು ಗೂಗಲ್ ಪೇ ಮೂಲಕ ಮಹದೇಸ್ವಾಮಿ ಹಣ ನೀಡಿದ್ದರು ಎಂದು ತಿಳಿದು ಬಂದಿದೆ.

ಏನಿದು ಪ್ರಕರಣ?
ಕಾಲುಗಳಿಗೆ ಹಗ್ಗ ಕಟ್ಟಿಕೊಂಡು ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಶನಿವಾರ ಮೈಸೂರಿನ ಹೆಚ್‌ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿತ್ತು. ಮೃತರನ್ನು ಮಹದೇವಸ್ವಾಮಿ, ಪತ್ನಿ ಮಂಜುಳಾ ಹಾಗೂ ಕಿರಿಯ ಮಗಳು ಹರ್ಷಿತಾ ಎಂದು ಗುರುತಿಸಲಾಗಿತ್ತು.

ಮಹದೇವಸ್ವಾಮಿ ಅವರಿಗೆ ಅರ್ಪಿತಾ ಹಾಗೂ ಹರ್ಷಿತಾ ಎಂಬ ಇಬ್ಬರು ಹೆಣ್ಣುಮಕ್ಕಳು. ಮಹದೇವಸ್ವಾಮಿ ಕುಟುಂಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟು ಹೆಚ್‌ಡಿ.ಕೋಟೆಯಲ್ಲಿ ವಾಸವಿದ್ದರು. ಅಲ್ಲಿಯೂ ಸ್ವಂತ ಮನೆ ಖರೀದಿ ಮಾಡಿದ್ದರು. ಹಿರಿಯ ಮಗಳು ಅರ್ಪಿತಾ ಮೈಸೂರಿನಲ್ಲಿ ಕಾನೂನು ಪದವಿ ಓದುತ್ತಿದ್ದಳು. ಎರಡನೇ ಮಗಳು ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದಳು.

ಅರ್ಪಿತಾ ಮೈಸೂರಿನಲ್ಲಿ ಅನ್ಯಜಾತಿಯ ಹುಡುಗನ ಜೊತೆ ಪ್ರೀತಿಗೆ ಬಿದ್ದು, ಆತನನ್ನೇ ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದಳು. ತಂದೆ ಮಹದೇವಸ್ವಾಮಿ ಸಮುದಾಯದ ಜನರಿಗೆ ಹೆದರಿ ಮದುವೆ ನಿರಾಕರಿಸಿದ್ದರು. ತಂದೆ, ತಾಯಿ ನಿರ್ಧಾರವನ್ನು ಧಿಕ್ಕರಿಸಿ ಅರ್ಪಿತಾ ಮನೆ ಬಿಟ್ಟು ತೆರಳಿದ್ದಳು. ಮಗಳ ಈ ನಿರ್ಧಾರದಿಂದ ಮರ್ಯಾದೆ ಹೋಯಿತು ಎಂದು ಭಾವಿಸಿ ಮಹದೇವಸ್ವಾಮಿ, ಪತ್ನಿ ಹಾಗೂ ಕಿರಿಯ ಮಗಳ ಸಮೇತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆ ತೊರೆದಿದ್ದ ಹಿರಿಯ ಮಗಳು ಅರ್ಪಿತಾ, ತಂದೆ, ತಾಯಿ ಹಾಗೂ ಸಹೋದರಿಯ ಅಂತಿಮ ದರ್ಶನಕ್ಕೂ ಬರಲಿಲ್ಲ. ಹಿರಿಯ ಮಗಳ ಈ ನಡೆಗೆ ಗ್ರಾಮಸ್ಥರೆಲ್ಲ ಆಕ್ರೋಶ ಹೊರಹಾಕಿದ್ದಾರೆ. ಮಗಳ ತೀರ್ಮಾನದಿಂದಲೇ ಮನನೊಂದು ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಹಿರಿಯ ಮಗಳಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವನೊಂದಿಗೆ ಮನೆಬಿಟ್ಟು ಹೋದ ಮಗಳು – ಮನನೊಂದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ

Share This Article