ಮೈಸೂರು: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಭರದ ಸಿದ್ಧತೆ ಎಲ್ಲೆಡೆ ನಡೆಯುತ್ತಿದೆ. ಇತ್ತ ಅರಮನೆ ನಗರಿ ಮೈಸೂರಿನಲ್ಲೂ ನೂತನ ವರ್ಷವನ್ನು ಬರ ಮಾಡಿಕೊಳ್ಳಲು ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ.
ಮೈಸೂರಿನ ಶ್ರೀ ಯೋಗಾ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷದ ಮೊದಲ ದಿನ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲು ಬರೋಬ್ಬರಿ 2 ಲಕ್ಷ ತಿರುಪತಿ ಮಾದರಿಯ ಲಡ್ಡು ತಯಾರಾಗುತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಯೋಗಾನರಸಿಂಹಸ್ವಾಮಿ ದೇಗುಲ ಸುದರ್ಶನ ನರಸಿಂಹ ಕ್ಷೇತ್ರವೆಂದೇ ಹೆಸರುವಾಸಿವಾಗಿದೆ.
1994 ರಿಂದಲೂ ಹೊಸ ವರ್ಷದ ಮೊದಲ ದಿನ ಈ ಲಡ್ಡುಗಳನ್ನು ವಿತರಣೆ ನಡೆಯುತ್ತಿದೆ. ಈ ಬಾರಿ ಎರಡು ಲಕ್ಷ ಲಡ್ಡುಗಳನ್ನು ವಿತರಿಸಲು ನಿರ್ಧರಿಸಿದ್ದು, ಡಿಸೆಂಬರ್ 20ರಿಂದಲೇ ಲಡ್ಡುಗಳನ್ನು ತಯಾರಿಸುವ ಕಾರ್ಯ ಶುರುವಾಗಿದೆ. ಡಿಸೆಂಬರ್ 31ಕ್ಕೆ ಲಡ್ಡುಗಳ ತಯಾರಿ ಮುಕ್ತಾಯವಾಗಲಿದೆ. 50 ಮಂದಿ ನುರಿತ ಬಾಣಸಿಗರು ಲಡ್ಡು ತಯಾರಿಸುತ್ತಿದ್ದಾರೆ.
ಲಡ್ಡುಗಳ ತಯಾರಿಗಾಗಿ 50 ಕ್ವಿಂಟಾಲ್ ಕಡ್ಲೆ ಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4,000 ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100 ಕೆ.ಜಿ ಬಾದಾಮಿ, 200 ಕೆ.ಜಿ ಡೈಮಂಡ್ ಸಕ್ಕರೆ, 500 ಕೆ.ಜಿ ಬೂರಾ ಸಕ್ಕರೆ, 10 ಕೆ.ಜಿ ಪಿಸ್ತಾ, 20 ಕೆ.ಜಿ ಏಲಕ್ಕಿ, 20 ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 5 ಕೆ.ಜಿ ಕರ್ಪೂರ, 100 ಕೆ.ಜಿ ಲವಂಗ ಬಳಕೆ ಮಾಡಿಕೊಳ್ಳಲಾಗುತ್ತಿದೆ.