ಮೈಸೂರು: ದೇವಸ್ಥಾನದಲ್ಲಿ ಹುಂಡಿ ಇಡುವ ವಿಚಾರದಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ತಗಡೂರು ಗ್ರಾಮದ ಸಪ್ತ ದೇವಾಲಯದ ಮುಂದೆ ಭಾರೀ ಹೈಡ್ರಾಮಾ ನಡೆದಿದೆ.
ದೇವಸ್ಥಾನದ ಅರ್ಚಕರು ಹುಂಡಿ ಇಡುವುದು ಬೇಡ ಅಂತಿದ್ದಾರೆ. ಆದರೆ ದೇವಸ್ಥಾನದ ಟ್ರಸ್ಟ್ ನವರು ಹಾಗೂ ಗ್ರಾಮಸ್ಥರು ಹುಂಡಿ ಇಡಿ ಅಂತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ವಾರದಿಂದ ಗಲಾಟೆ ನಡೆಯುತ್ತಿದೆ. ಈಗ ದೇವಸ್ಥಾನದ ಬಾಗಿಲ ಮುಂದೆ ನಿಂತ ಗ್ರಾಮದ ಮಹಿಳೆಯರು ಅರ್ಚಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಅರ್ಚಕರ ಬೆಂಬಲಿಗರು ಹಾಗೂ ಟ್ರಸ್ಟ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಅರ್ಚಕರಿಗೆ ಲೆಕ್ಕ ಕೊಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ದೇವಸ್ಥಾನಕ್ಕೆ ಸಂಪ್ರದಾಯವಾಗಿ ಕೊಡುವ ತಾಳಿಯನ್ನ ಅರ್ಚಕರು ಲಪಟಾಯಿಸುತ್ತಿದ್ದಾರೆ. ಹೀಗಾಗಿ ಹುಂಡಿ ಇಡಲು ವಿರೋಧಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ಹುಂಡಿ ಇಡಬೇಕು ಎಂಬ ಟ್ರಸ್ಟ್ ನ ಆಗ್ರಹ ಪ್ರಶ್ನಿಸಿ ದೇವಸ್ಥಾನದ ಅರ್ಚಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಗಲಾಟೆ ಹಿನ್ನೆಲೆಯಲ್ಲಿ ಶಿವರಾತ್ರಿ ಮುನ್ನ ದಿನದಿಂದ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ಇದರಿಂದ ದೇವರಿಗೆ ಪೂಜೆ ಇಲ್ಲದಂತಾಗಿದೆ. ಈ ವಿಚಾರದಲ್ಲಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೇವಸ್ಥಾನದ ಬಳಿ ಪೊಲೀಸ್ ನಿಯೋಜಿಸಲಾಗಿದೆ.