ಮೈಸೂರು: ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹೇಳಿದ್ದಾರೆ.
ತನ್ವೀರ್ ಸೇಠ್ ಅವರ ಕುತ್ತಿಗೆ ಭಾಗದಲ್ಲಿ ಗಾಯವಾಗಿದೆ. ಕುತ್ತಿಗೆಯಲ್ಲಿರುವ ರಕ್ತನಾಳ, ನರಗಳಿಗೆ ಪೆಟ್ಟಾಗಿದೆ. ಕುತ್ತಿಗೆ ಭಾಗವು ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಿಸಿದೆ. ಆದ್ದರಿಂದ ಅವರ ಅರೋಗ್ಯ ಸ್ಥಿತಿ ಸದ್ಯಕ್ಕೆ ಗಂಭೀರ ವಾಗಿದೆ. ಇನ್ನು 48 ಗಂಟೆಗಳ ಕಾಲ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಒಳಗಿನ ನರಗಳು ಮತ್ತು ಬೆನ್ನು ಹುರಿಗೆ ಯಾವ ರೀತಿ ಹಾನಿಯಾಗಿದೆ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಲಿದೆ. ರಾತ್ರಿ ಅವರ ಗಾಯಗಳಿಗೆ ರಕ್ತಸ್ರಾವಾಗದ ರೀತಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಿಪಿ, ಶುಗರ್ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಅದರ ಹೊರತಾಗಿ ಯಾವುದೇ ರೀತಿಯ ಆರೋಗ್ಯ ಏರುಪೇರಿಲ್ಲ. ಜನರು ಪ್ರಾರ್ಥನೆ ಮಾಡಲಿ. ಆಸ್ಪತ್ರೆಗೆ ಬರುವುದು ಬೇಡ. ಬರುವವರನ್ನು ಒಳಗೆ ನೋಡಲು ಬಿಡುತ್ತಿಲ್ಲ ಎಂದು ಡಾ.ಉಪೇಂದ್ರ ಶೆಣೈ ಅವರು ಹೇಳಿದ್ದಾರೆ. ಇದನ್ನು ಓದಿ: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ
ನಡೆದಿದ್ದೇನು?
ಭಾನುವಾರ ರಾತ್ರಿ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದ. ಅವರ ಕತ್ತಿಗೆ ಭಾಗಕ್ಕೆ ಚಾಕು ಹಾಕಿ ಪರಾರಿಯಾಗುತ್ತಿದ್ದ ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸೇಠ್ ಅವರನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.