– 12 ದಿನ ಪೊಲೀಸ್ ಕಸ್ಟಡಿಗೆ ಆರೋಪಿ
ಮೈಸೂರು: ಮಾಜಿ ಸಚಿವ ತನ್ವೀರ್ ಸೇಠ್ ಅವರ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು ರಾತ್ರೋರಾತ್ರಿ ಮನೆ ಖಾಲಿಮಾಡಿಕೊಂಡು ಪರಾರಿಯಾಗಿದ್ದಾರೆ.
ನಿನ್ನೆ ತಡರಾತ್ರಿಯೇ ಮನೆಯಿಂದ ಪರಾರಿಯಾಗಿರುವ ಫರಾನ್ ಪಾಷಾ ಕುಟುಂಬಸ್ಥರು, ಫರಾನ್ ತಂದೆ, ತಾಯಿ ಮತ್ತು ತಂಗಿ ಎಲ್ಲರು ಮನೆ ಖಾಲಿ ಮಾಡಿದ್ದಾರೆ. ಮೈಸೂರಿನ ಗೌಸಿಯಾ ನಗರದಲ್ಲಿ ವಾಸವಿದ್ದ ಫರಾನ್ ಕುಟುಂಬ ಪೊಲೀಸರ ವಿಚಾರಣೆಗೆ ಹೆದರಿ ಮನೆ ಬಿಟ್ಟ ತಲೆಮರೆಸಿಕೊಂಡಿದೆ.
Advertisement
Advertisement
ಸದ್ಯ ಆರೋಪಿ ಫರಾನ್ ಪೋಲಿಸರ ವಶದಲ್ಲಿದ್ದು, ಆರೋಪಿಯನ್ನು ಸೋಮವಾರ ರಾತ್ರಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರು ಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಪೊಲೀಸರು ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ ಮೈಸೂರು ಜೆಎಂಎಫ್‍ಸಿ ನ್ಯಾಯಾಧೀಶರು ಆರೋಪಿ ಫರಾನ್ ನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಇದನ್ನು ಓದಿ: ‘ಗಣ್ಯರನ್ನು ಕೊಲೆ ಮಾಡಿ ಫೇಮಸ್ ಆಗ್ತೀನಿ’ – ಸ್ನೇಹಿತರ ಬಳಿ ಕೊಚ್ಚಿಕೊಂಡಿದ್ದ ಫರಾನ್
Advertisement
ಇತ್ತ ತನ್ವೀರ್ ಸೇಠ್ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಈವರೆಗೆ ವಿಚಾರಣೆಯಲ್ಲಿ ಹಲ್ಲೆಗೆ ನಿಖರ ಕಾರಣವನ್ನು ಆರೋಪಿ ಫರಾನ್ ಪಾಷಾ ಬಾಯಿಬಿಟ್ಟಿಲ್ಲ. ಆದ್ದರಿಂದ ತನಿಖೆ ಚುರುಕುಗೊಳಿಸಿರುವ ಪೋಲಿಸರು ಆತನ ಸ್ನೇಹಿತರು ಸೇರಿ ಹಲವು ಅನುಮಾನಿತರ ವಿಚಾರಣೆ ಮಾಡುತ್ತಿದ್ದಾರೆ. ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.