ಮೈಸೂರು: ಪರ್ವತಾರೋಹಿಗಳಿಗೆ ಹಿಮಾಲಯ ಶಿಖರವನ್ನೇರಬೇಕೆಂಬ ಕನಸಿರುತ್ತದೆ. ಆದರೆ ಆ ಅವಕಾಶ ಎಲ್ಲರಿಗೂ ಸಿಗೋದು ಕಷ್ಟ. ಆದರೆ ಮೈಸೂರಿನ ಬುಡಕಟ್ಟು ಮಕ್ಕಳಿಗೆ ಈ ಗಗನ ಕುಸುಮ ಸುಲಭವಾಗಿ ಸಿಕ್ಕಿದ್ದು, ಆ ಅವಕಾಶವನ್ನು ಮಕ್ಕಳು ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ.
ನಾಗರಹೊಳೆ ಹಾಗೂ ಬಂಡೀಪುರದ ಆದಿವಾಸಿ ಮಕ್ಕಳು, ಇದೀಗ ಹಿಮಾಲಯದ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸಿ ಸಾಧನೆ ಮಾಡಿದ್ದಾರೆ. ಆ ಸಾಧನೆ ಹಿಂದೆ ಅವರ ಶ್ರಮ ಬಹಳ ದೊಡ್ಡದಿದೆ. ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ವಿವೇಕಾನಂದ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿಗಳು ಹಿಮಾಲಯದ ಹಿಮಾಚಲ ಪ್ರದೇಶದ ಧೌಲಾರ್ಧ ರೇಂಜ್‍ನಲ್ಲಿರುವ 14 ಸಾವಿರ ಅಡಿ ಎತ್ತರದ ಸೌರ್ಕುಂಡ ಪಾಸ್ ಶಿಖರವನ್ನೇರಿದ್ದಾರೆ.
Advertisement
Advertisement
ಟೈಗರ್ ಅಡ್ವೆಂಚರ್ ಫೌಂಡೇಶನ್, ಲೇಡಿಸ್ ಸರ್ಕಲ್ ಇಂಡಿಯಾ ವತಿಯಿಂದ ಹಾಡಿ ವಿದ್ಯಾರ್ಥಿಗಳಿಗಾಗಿ ವಿಶೇಷ ಚಾರಣವನ್ನು ಆಯೋಜಿಸಲಾಗಿತ್ತು. ಈ ಚಾರಣದಲ್ಲಿ 12 ಜನ ಬುಡಕಟ್ಟು ಕಲಿಕಾ ಕೇಂದ್ರದ ವಿದ್ಯಾರ್ಥಿನಿಯರು, ಇಬ್ಬರು ಗ್ರಾಮೀಣ ವಿದ್ಯಾರ್ಥಿನಿಯರು ಸೇರಿದಂತೆ ವಿವಿಧ ಜಿಲ್ಲೆಯ ಒಟ್ಟು 41 ಮಂದಿ ಮೈಸೂರಿನಿಂದ ತೆರಳಿ ಹಿಮಾಲಯವನ್ನ ಏರಿದ್ದಾರೆ.
Advertisement
ಮೇ 2ಕ್ಕೆ ಮೈಸೂರಿನಿಂದ ಈ ತಂಡ ಹೊರಟಿತ್ತು. ಮೈನಸ್ 5-ಡಿಗ್ರಿ ಸೆಲ್ಸಿಯಸ್ ನಲ್ಲಿದ್ದ ಸ್ಥಳದಲ್ಲಿ ಮೊದಲಿಗೆ ಮಕ್ಕಳಿಗೆ ಭಯ ಶುರುವಾಗಿದೆ. ನಾವು ನಿಜಕ್ಕೂ 14 ಸಾವಿರ ಅಡಿಯ ಈ ಶಿಖರ ಏರುತ್ತೀವಾ ಎಂಬ ಅನುಮಾನ ಇತ್ತು. ಯಾವಾಗ ಶಿಖರವೇರಲು ಶುರು ಮಾಡಿದ್ರೋ, ಸಹಪಾಠಿಗಳ ಉತ್ಸಾಹ ಎಲ್ಲವೂ ಮಕ್ಕಳನ್ನ ಗುರಿ ತಲುಪುವಂತೆ ಮಾಡಿತ್ತು. ಇದೇ ಖುಷಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ತಮ್ಮ ಗುರಿ ಆಸೆ ಎರಡು ಈಡೇರಿಸಿಕೊಂಡಿರುವುದಾಗಿ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
Advertisement
ಮೇ 2ರಂದು ಮೈಸೂರಿನಿಂದ ಹೊರಟ ತಂಡ ಮೇ 9ಕ್ಕೆ ಸರಿಯಾಗಿ ಬೆಳಗ್ಗೆ 9 ಗಂಟೆ 12 ನಿಮಿಷಕ್ಕೆ ಹಿಮಾಲಯ ಏರಿ ಗುರಿ ಮುಟ್ಟಿದರು. ಹಿಮಾಲಯ ಏರಲು ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಕಳೆದ ನಾಲ್ಕು ತಿಂಗಳಿನಿಂದ ವಿಶೇಷ ತರಬೇತಿ ಪಡೆದಿದ್ದರು. ರನ್ನಿಂಗ್ ಜಂಪಿಂಗ್ ಕಂಬಿಯ ಕೆಳಗೆ ನುಸುಳುವುದು ಸೇರಿದಂತೆ ಸಾಕಷ್ಟು ದೈಹಿಕ ಕಸರತ್ತುಗಳ ತರಬೇತಿ ಮೂಲಕ ಎಲ್ಲಾ ವಿದ್ಯಾರ್ಥಿಗಳನ್ನು ಹಿಮಾಲಯದ ಕಠಿಣ ಪರಿಸ್ಥಿತಿಗೆ ಹೊಂದುಕೊಳ್ಳುವಂತೆ ಸಜ್ಜುಗೊಳಿಸಲಾಗಿತ್ತು. ಅಲ್ಲದೆ ಈ ಚಾರಣಕ್ಕೆ ಬರೋಬ್ಬರಿ 8.5 ಲಕ್ಷ ವೆಚ್ಷವನ್ನ ದಾನಿಗಳು ನೀಡಿದ್ದಾರೆ. ಕೇವಲ ನಮ್ಮ ದೇಶದವರು ಮಾತ್ರವಲ್ಲ ವಿದೇಶದಲ್ಲಿರುವವರು ಬುಡಕಟ್ಟು ವಿದ್ಯಾರ್ಥಿನಿಯರಿಗೆ ಸಹಾಯ ಮಾಡಿದ್ದಾರೆ. ಒಟ್ಟಾರೆ, ಮೈಸೂರಿನ ಹಾಡಿ ಮಕ್ಕಳ ಸಾಧನೆ ಇದೀಗ ಹಿಮಾಲಯ ಶಿಖರವನ್ನೇರಿ ತ್ರಿವರ್ಣ ಧ್ವಜ ಹಾರಿಸುವ ಹಂತಕ್ಕೆ ತಲುಪಿದೆ.