ಬೆಂಗಳೂರು: ಅವಾಚ್ಯ ಪದಗಳಿಂದ ನಿಂದಿಸಿದ್ದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದೇ ದೂರು ನೀಡಿದ್ದ ಇನ್ಸ್‌ಪೆಕ್ಟರ್ ಸಿ.ವಿ.ರವಿ ಅವರನ್ನೇ ವರ್ಗಾವಣೆ ಮಾಡಲಾಗಿದೆ.
ಇನ್ಸ್‌ಪೆಕ್ಟರ್ ಸಿ.ವಿ.ರವಿ ಅವರನ್ನು ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಿಂದ ಉಡುಪಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಉನ್ನತ ಅಧಿಕಾರಿ ವಿರುದ್ಧ ದೂರು ನೀಡಿದ್ದ ಹಿನ್ನಲೆಯಲ್ಲಿ ತಪ್ಪು ಮಾಡದ ರವಿ ಅವರಿಗೆ ವರ್ಗಾವಣೆ ಶಿಕ್ಷೆ ಕೊಟ್ಟಿದ್ದು ಎಷ್ಟು ಸರಿ ಎನ್ನುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
Advertisement
ಏನಿದು ಪ್ರಕರಣ?:
ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವ ವಿಚಾರದಲ್ಲಿ ರವಿ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವಾಚ್ಯ ಪದಗಳಿಂದ ನಿಂದಿಸಿದ್ದರು. ಇದರಿಂದ ಮನನೊಂದ ರವಿ, ಅಮಿತ್ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದು, ಇದಕ್ಕೆ ಅನುಮತಿ ನೀಡಬೇಕೆಂದು ಬೆಂಗಳೂರು ದಕ್ಷಿಣ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರಿಗೆ ಮನವಿ ಸಲ್ಲಿಸಿದ್ದರು.
Advertisement
Advertisement
ಮನವಿ ಪತ್ರದಲ್ಲಿ ಏನಿದೆ?:
ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನನ್ನು ಮೈಸೂರು ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಇದರಿಂದಾಗಿ ಎಸ್‍ಪಿ ಅಮಿತ್ ಸಿಂಗ್ ಅವರನ್ನು ಭೇಟಿಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಜನವರಿ 15ರಂದು ಕಚೇರಿಗೆ ತೆರಳಿದ್ದೆ. ಆದರೆ ಅಮಿತ್ ಸಿಂಗ್ ಅವರು ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ನಾನು ಅವರಿಗೆ ಕರೆ ಮಾಡಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದಿದ್ದೇನೆ ಅಂತ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸ್ವಲ್ಪ ಹೊತ್ತು ಕಾಯುವಂತೆ ಹೇಳಿದರು.
Advertisement
ವರ್ಗಾವಣೆ ಆದೇಶ ಪತ್ರವನ್ನು ಜಿಲ್ಲಾ ನಿಸ್ತಂತು ಕಚೇರಿಗೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದಿದ್ದೆ. ಬಳಿಕ ಅಮಿತ್ ಸಿಂಗ್ ಆದೇಶಕ್ಕೆ ಕಾಯುತ್ತಾ ಕಚೇರಿಯ ಹೊರಗೆ ಕುಳಿತಿದ್ದೆ. ಈ ವೇಳೆ ಎಸ್‍ಪಿ ಅವರು ಎರಡು ಬಾರಿ ಫೋನ್ ಮಾಡಿದ್ದರು. ಆದರೆ ನನ್ನ ಫೋನ್ ಸೈಲೆಂಟ್ ಮೂಡ್‍ನಲ್ಲಿ ಇದ್ದಿದ್ದರಿಂದ ಕರೆ ಬಂದಿರುವುದು ಗೊತ್ತಾಗಿರಲ್ಲಿಲ್ಲ. ಮೊಬೈಲ್ ತೆಗೆದು ನೋಡಿದಾಗ ಮಿಸ್ಡ್ ಕಾಲ್ ಆಗಿರುವುದನ್ನು ನೋಡಿ ತಕ್ಷಣ ಅವರಿಗೆ ಕರೆ ಮಾಡಿದೆ. ಅಮಿತ್ ಸಿಂಗ್ ಅವರು ಏಕಾಏಕಿ ಕೀಳುಮಟ್ಟದ ಭಾಷೆಯಲ್ಲಿ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿದರು ಎಂದು ಇನ್ಸ್‍ಪೆಕ್ಟರ್ ಸಿ.ವಿ.ರವಿ ಮನವಿ ಪತ್ರದಲ್ಲಿ ತಿಳಿಸಿದ್ದರು.
ಈ ಪ್ರಕರಣದ ಸಂಬಂಧ ಅಮಿತ್ ಸಿಂಗ್ ಅವರು ಅವಾಚ್ಯ ಪದಗಳಿಂದ ನಿಂದಿಸಿದ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಅಮಿತ್ ಸಿಂಗ್ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಸಿ.ವಿ.ರವಿ ಅವರ ಮೈಸೂರು ಗ್ರಾಮಾಂತರ ವೃತ್ತಕ್ಕೆ ವರ್ಗಾವಣೆ ರದ್ದು ಮಾಡಿ, ಉಡುಪಿಗೆ ವರ್ಗಾವಣೆ ಮಾಡಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv