ಧಾರವಾಡ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ(ಕೆಎಸ್‍ಐಸಿ)ದಿಂದ ನಗರದ ಭಾವಸಾರ ಮಂಗಳ ಕಾರ್ಯಾಲಯದಲ್ಲಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ.
ಡಿಸೆಂಬರ 26 ರವರೆಗೆ ಕರ್ನಾಟಕದ ಪಾರಂಪಾರಿಕ ಉತ್ಪನ್ನವಾದ “ಮೈಸೂರ್ ಸಿಲ್ಕ್” ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ವರ್ತಿಕಾ ಕಟಿಯಾರ್, ದೇಶದಲ್ಲಿ ದೊರೆಯುವ ಇತರೆ ರೇಷ್ಮೆ ವಸ್ತ್ರಗಳಿಗಿಂತ “ಮೈಸೂರ್ ಸಿಲ್ಕ್” ವಿಭಿನ್ನವಾಗಿದೆ, ಇದು ಹಳೇ ಮೈಸೂರು ಪ್ರದೇಶದಲ್ಲಿ ದೊರೆಯುವ ಪ್ರಾಕೃತಿಕ ರೇಷ್ಮೆಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆಯಿಂದ ಮಾಡಲ್ಪಟ್ಟಿದೆ. ಕೆಎಸ್‍ಐಸಿ ಮೈಸೂರು ಸಿಲ್ಕ್ ಸೀರೆಗಳು ಈಗಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುವ ಮತ್ತು ಬೇಡಿಕೆಯಲ್ಲಿವೆ. ಅದರಲ್ಲೂ ಮಹಿಳೆಯರಿಗೆ ವಿವಾಹಗಳ ಮತ್ತು ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಬಹು ಅಚ್ಚುಮೆಚ್ಚಿನ ಆಯ್ಕೆಯಾಗಿವೆ ಎಂದರು.