Connect with us

Districts

‘ಬಲಗಾಲಿಟ್ಟು ಒಳ ಪ್ರವೇಶಿಸಿ’- ಕಾರ್ಯಕರ್ತರಿಗೆ ರೇವಣ್ಣ ವಾಸ್ತು ಪಾಠ

Published

on

ಮೈಸೂರು: ಒಳಗೆ ಹೋದವರನ್ನು ಹೊರಗೆ ಕರೆದು ಬಲಗಾಲಿಟ್ಟು ಒಳಗಡೆ ಹೋಗಿ ಎಂದು ಮಾಜಿ ಸಚಿವ ರೇವಣ್ಣ ಇಂದು ಕಾರ್ಯಕರ್ತರನ್ನು ನಾಮಪತ್ರ ಸಲ್ಲಿಸಲು ಕಳುಹಿಸಿದ್ದಾರೆ.

ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿರುವ ಸೋಮಶೇಖರ್ ಅವರು ನಾಮಪತ್ರ ಸಲ್ಲಿಸುವ ವೇಳೆ ರೇವಣ್ಣ ಕಾರ್ಯಕರ್ತರಿಗೆ ವಾಸ್ತು ಪಾಠ ಮಾಡಿದ್ದಾರೆ.

ಸೋಮಶೇಖರ್ ಜೊತೆ ನಾಮಪತ್ರ ಸಲ್ಲಿಸಲು ರೇವಣ್ಣ ಆಗಮಿಸಿದ್ದರು. ಈ ವೇಳೆ ಕೆಲ ಕಾರ್ಯಕರ್ತರು ಎಡಗಾಲಿಟ್ಟು ಕಚೇರಿಯನ್ನು ಪ್ರವೇಶಿಸಿದ್ದಾರೆ. ಇದನ್ನು ಗಮನಿಸಿದ ರೇವಣ್ಣ ಒಳಗೆ ಹೋದವರನ್ನು ವಾಪಸ್ ಕರೆದು ಬಲಗಾಲಿಟ್ಟು ಕಚೇರಿಯೊಳಗೆ ಹೋಗುವಂತೆ ಸೂಚಿಸಿದ್ದಾರೆ. ಇದನ್ನು ಓದಿ:ಕೈ-ತೆನೆ ಸಮಾವೇಶಕ್ಕೂ ಬಂತು ವಾಸ್ತು – ರೇವಣ್ಣ ಸಲಹೆಯಂತೆ ಮುಖ್ಯವೇದಿಕೆ ನಿರ್ಮಾಣ

ಸದಾ ವಾಸ್ತು ಪ್ರಕಾರವಾಗಿ ನಡೆದುಕೊಳ್ಳುವ ರೇವಣ್ಣನವರು ಇಂದು ಎಡಗಾಲಿಟ್ಟು ಒಳಗೆ ಹೋಗಿದ್ದ ವಕೀಲರೊಬ್ಬರನ್ನು ಎಳೆದು ಹೊರಗೆ ಕರೆದು ಮತ್ತೆ ಒಳಗೆ ಬಲಗಾಲಿಟ್ಟು ಹೋಗುವಂತೆ ಹೇಳಿದರು. ನಂತರ ಮೊತ್ತೊಬ್ಬ ಜೆಡಿಎಸ್ ಕಾರ್ಯಕರ್ತ ಎಡಗಾಲಿಟ್ಟು ಒಳಗೆ ಹೋಗಿದ್ದನ್ನು ಗಮನಿಸಿ ಆತನನ್ನು ವಾಪಸ್ ಕರೆದು ಬಲಗಾಲಿಟ್ಟು ಹೋಗುವಂತೆ ಸೂಚಿಸಿದ್ದಾರೆ.

ಜೋತಿಷ್ಯ ವಿಚಾರಕ್ಕೆ ಹೆಚ್ಚು ಪ್ರಮುಖ್ಯತೆ ನೀಡುವ ರೇವಣ್ಣ ಈ ಹಿಂದೆಯೂ ಕೂಡ ಬೆಂಗಳೂರಿನ ಮೈದಾನವೊಂದರಲ್ಲಿ ನಡೆದ ಮೈತ್ರಿ ಸರ್ಕಾರದ ಸಮಾವೇಶದಲ್ಲಿ ನಿಂಬೆಹಣ್ಣುಗಳನ್ನು ಹಿಡಿದು ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಕಾಣಿಸಿಕೊಂಡಿದ್ದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಓದಿ: ವಾಸ್ತು ಪ್ರಕಾರ ಶಿರಾಡಿ ಘಾಟ್ ಉದ್ಘಾಟಿಸಿದ ಸಚಿವ ಹೆಚ್.ಡಿ.ರೇವಣ್ಣ

ಗ್ರಹ, ಕಾಲ ನೋಡಿಯೇ ಮುಂದುವರಿಯುವ ಎಚ್.ಡಿ.ರೇವಣ್ಣ ಅವರು ಸರ್ಕಾರ ಮತ್ತು ಜೆಡಿಎಸ್ ಮಹತ್ವದ ಕಾರ್ಯಕ್ರಮಗಳಿಗೆ ಸರಿಯಾದ ಸಮಯವನ್ನು ನಿಗದಿ ಮಾಡಿ ಸುದ್ದಿಯಾಗುತ್ತಿದ್ದರು. 2018ರ ಚುನಾವಣೆ ನಡೆದು ವಿಧಾನಸಭೆಯಲ್ಲಿ ಶಾಸಕರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ವೇಳೆ ತಮಗೆ ಶುಭಕಾಲದಲ್ಲೇ ಪ್ರಮಾಣವಚನ ನೀಡಲು ಸ್ಪೀಕರ್ ಬೋಪಯ್ಯ ಅವರಿಗೆ ಚೀಟಿ ನೀಡಿದ್ದರು. ಈ ವೇಳೆ ಬೋಪಯ್ಯ,”ಈಗ ಕುಳಿತುಕೊಳ್ಳಿ ಸಂಜೆ 4 ಗಂಟೆಯವರೆಗೆ ಸಮಯಾವಕಾಶವಿದೆ. ನಿಗದಿತ ಪಟ್ಟಿಯಂತೆ ಪ್ರಮಾಣವಚನ ನಡೆಯುತ್ತದೆ” ಎಂದು ತಿಳಿಸಿದ್ದರು.

ಈ ವೇಳೆ ರೇವಣ್ಣ ಪತ್ರಕರ್ತರ ಗ್ಯಾಲರಿಗೆ ಬಂದಾಗ ಮಾಧ್ಯಮದವರು ಉತ್ತಮ ಗಳಿಗೆಯನ್ನು ನೋಡಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿರಾ ಎಂದು ಕೆಣಕಿದರು. ಇದಕ್ಕೆ,”ನನ್ನದು ಸ್ವಾತಿ ನಕ್ಷತ್ರ ಯಾವುದೇ ಗಳಿಗೆ ಇಲ್ಲ. ಯಾವಾಗ ಬೇಕಾದರೂ ಪ್ರಮಾಣವಚನ ಸ್ವೀಕರಿಸಬಹುದು” ಎಂದು ಹೇಳಿ ರೇವಣ್ಣ ಹೊರ ನಡೆದಿದ್ದರು. ಆರಂಭದಲ್ಲಿ 5 ಮಂದಿ ನಂತರ 10 ಮಂದಿ ಬಳಿಕ ಇಬ್ಬರಂತೆ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ರೇವಣ್ಣ ಒಬ್ಬಂಟಿಯಾಗಿ ಮಧ್ಯಾಹ್ನ 12.50ಕ್ಕೆ ಪ್ರಮಾಣವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

Click to comment

Leave a Reply

Your email address will not be published. Required fields are marked *