ಕೋಲಾರ: ನನ್ನ ನಾಟಕ ಟಿಪ್ಪು ವಿರುದ್ಧ ಅಲ್ಲ, ಮುಸ್ಲಿಂ ವಿರುದ್ಧ ಅಲ್ಲ. ತುಕ್ಡೆ ತುಕ್ಡೆ ಅನ್ನೋರು, ಪೊಲೀಸ್ ಠಾಣೆಗೆ ಬೆಂಕಿ ಹಾಕುವವರ ವಿರುದ್ಧವಾಗಿದೆ ಎಂದು ರಂಗಾಯಣ (Rangayana) ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ (Addanda Cariappa) ತಿಳಿಸಿದ್ದಾರೆ.
ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ಜನರು ವಿರೋಧ ಮಾಡುತ್ತಿದ್ದಾರೆ. ರಣ ಹೇಡಿಯ ನಿಜ ರೂಪ ಬಯಲು ಮಾಡುವುದು ನನ್ನ ಉದ್ದೇಶ. ನಾಟಕ ಅಂದ್ರೆ ಕಲ್ಪನೆ ಅಲ್ಲ, ಸತ್ಯದ ಅನಾವರಣ. ಟಿಪ್ಪು ವೀರನಲ್ಲ. ಆತನ ಮತ್ತೊಂದು ಮುಖವಾಡವೆ ಟಿಪ್ಪು ನಿಜ ಕನಸುಗಳು (Tippu Nija Kanasugalu) ನಾಟಕ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನ್ನ ಸ್ಥಿತಿ ಯಾರಿಗೂ ಬೇಡ- ಅಪ್ಪನ ನೆನಪಿಗಾಗಿ ಕ್ಯಾಂಟೀನ್ ಮಂಜಣ್ಣನಿಂದ ಉಚಿತ ಅಂಬುಲೆನ್ಸ್ ಸೇವೆ
ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನದ ಮೂಲಕ ಟಿಪ್ಪುವಿನ ಬಗ್ಗೆ ಮರೆಮಾಚಿದ್ದ ಮತ್ತೊಂದು ಮುಖವಾಡ ಬಯಲಾಗುತ್ತಿದೆ. ಮರೆಮಾಚಿದ್ದ ವಿಚಾರಗಳನ್ನು ಜನರ ಮುಂದೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಮಾ.7 ರಂದು ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಾಟಕ ಪ್ರದರ್ಶನವಾಗಲಿದೆ. ಈಗಾಗಲೇ ರಾಜ್ಯದಲ್ಲಿ 55 ಪ್ರದರ್ಶನಗಳನ್ನ ಮಾಡಲಾಗಿದೆ. ಆದ್ರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ವಾಕ್ ಸ್ವಾತಂತ್ರ್ಯ ಬಳಸಿಕೊಂಡು ನಾನು ನಾಟಕ ರೂಪಿಸಿದ್ದೇನೆ. ರಫಿವುಲ್ಲಾ ಎಂಬಾತ ನನ್ನ ವಿರುದ್ಧ ಬೆಂಗಳೂರಿನಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾನೆ. ನ್ಯಾಯಾಲಯದಲ್ಲಿ ನನ್ನ ಪರವಾಗಿ ತೀರ್ಪು ಬರಲಿದೆ. ನನ್ನ ನಾಟಕ ಪ್ರತಿನಿತ್ಯ ರಂಗಭೂಮಿಯಲ್ಲಿ ಸದ್ದು ಮಾಡುತ್ತದೆ. ನಾನು ಬಂದಾಗ ನನ್ನ ವಿರುದ್ಧ ಮಾತನಾಡುವುದು, ಫ್ಲೆಕ್ಸ್‍ಗಳನ್ನ ಹರಿದು ಹಾಕುವ ಕೆಲಸವನ್ನು ಮುಸ್ಲಿಂ ಮುಖಂಡರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬರಗೂರು ರಾಮಚಂದ್ರಪ್ಪ (Baraguru Ramachandrappa), ಗಿರೀಶ್ ಕಾರ್ನಾಡ್ (Girish Karnad) ಅವರು ಬರೆದ ನಾಟಕಗಳಿಗೆ ವಿರೋಧ ಇಲ್ಲ. ಆದ್ರೆ ನನ್ನ ನಾಟಕಕ್ಕೆ ಮಾತ್ರ ವಿರೋಧ ಇದೆ. ಯಾಕೆ ಅವರೆಲ್ಲಾ ದೊಡ್ಡವರು ಅಂತ ಪ್ರಶ್ನೆ ಮಾಡುತ್ತಿಲ್ವಾ? ಅವರೆಲ್ಲಾ ಎಡಪಂಥೀಯರು, ಬ್ರಾಹ್ಮಣರು ಸೇರಿದಂತೆ ಬೇರೆ ಬೇರೆಯವರನ್ನ ಹಲವು ರೀತಿಯಲ್ಲಿ ವರ್ಣಿಸಿದಾಗ ಖುಷಿ ಪಡ್ತಾರೆ. ಆದ್ರೆ ಟಿಪ್ಪು ಬಗ್ಗೆ ಅವರ ನಿಜ ರೂಪ ಬಯಲಾಗುತ್ತೆ ಅನ್ನೋ ಕಾರಣಕ್ಕೆ ವಿರೋಧ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ