– ಸರ್ಕಾರಿ ಹಾಸ್ಟೆಲ್‍ನಲ್ಲಿ ಅವ್ಯವಸ್ಥೆ
– ಟೀ ಮಾಡಲು 65 ವಿದ್ಯಾರ್ಥಿಗಳಿಗೆ 1.ಲೀ ಹಾಲು
ಮೈಸೂರು: ಹೆಚ್.ಡಿ.ಕೋಟೆ (H.D Kote) ಪಟ್ಟಣದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ (Kasturba Gandhi hostel) ಸರಿಯಾಗಿ ಊಟ ನಿಡುತ್ತಿಲ್ಲ ಎಂದು ವಿದ್ಯಾರ್ಥಿನಿಯರು (Students) `ಪಬ್ಲಿಕ್ ಟಿವಿ’ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕಳೆದ 15 ದಿನಗಳಿಂದ ವಸತಿ ನಿಲಯದಲ್ಲಿ ಸರಿಯಾದ ಊಟ ನೀಡುತ್ತಿಲ್ಲ. ವಸತಿ ನಿಲಯದಲ್ಲಿ ಆಹಾರ ಪದಾರ್ಥಗಳಿಲ್ಲದೆ ನಮಗೆ ಹೊಟ್ಟೆ ತುಂಬ ಊಟ ಸಿಗುತ್ತಿಲ್ಲ. ಕಾಫಿ, ಟೀ ಕೂಡ ಸರಿಯಾಗಿ ಸಿಗುತ್ತಿಲ್ಲ. 65 ವಿದ್ಯಾರ್ಥಿನಿಯರಿಗೆ 1 ಲೀಟರ್ ಹಾಲು ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿನಿಯರ ಊಟಕ್ಕೆ ಕೇವಲ 5.5 ಕೆಜಿ ಸೊಸೈಟಿ ಅಕ್ಕಿ ಕೊಡಲಾಗುತ್ತದೆ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಲ್ವಿಚಾರಕಿ, ಆಹಾರ ಪದಾರ್ಥ ಪೂರೈಸುವ ಗುತ್ತಿಗೆದಾರರು ಕೊಡುವ ಆಹಾರ ಪದಾರ್ಥದಿಂದಷ್ಟೇ ನಾನು ವಿದ್ಯಾರ್ಥಿನಿಯರಿಗೆ ಆಹಾರ ತಯಾರಿಸಿ ಕೊಡಬೇಕು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಸಾಮಾಗ್ರಿಗಳನ್ನು ಪೂರೈಸುತ್ತಿದ್ದ ಗುತ್ತಿಗೆದಾರ, ಕಡಿಮೆ ದರಕ್ಕೆ ಟೆಂಡರ್ ಪಡೆದುಕೊಂಡಿದ್ದು ಆ ದರದಲ್ಲಿ ವಿದ್ಯಾರ್ಥಿಗಳಿಗೆ ಆಹಾರ ಪೂರೈಸಲು ಸಾಧ್ಯವಾಗುತ್ತಿಲ್ಲ. ನಾನು ಪಡೆದುಕೊಂಡಿದ್ದ ಟೆಂಡರ್ ಅವಧಿ ಪೂರ್ಣಗೊಂಡಿದೆ. ನನ್ನ ಟೆಂಡರ್ ರದ್ದುಗೊಳಿಸಲು ಪತ್ರ ಬರೆದಿದ್ದೇನೆ. ನನಗೂ ಹಾಸ್ಟೆಲ್‍ಗೂ ಯಾವ ಸಂಬಂಧ ಇಲ್ಲ ಎಂದಿದ್ದಾರೆ.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಡಳಿತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ ಇದಾಗಿದೆ.