ಮೈಸೂರು: ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆದ್ದ ಹಿನ್ನಲೆಯಲ್ಲಿ ಶಾಸಕ ನಾರಾಯಣಗೌಡ ಇವತ್ತು ಮೈಸೂರಿನ ಚಾಮುಂಡೇಶ್ವರಿ ದೇವಿಯ ಹರಕೆ ತೀರಿಸಿದರು.
ಬೆಟ್ಟದ ಮೆಟ್ಟಿಲು ಹತ್ತಿ ದೇವಸ್ಥಾನಕ್ಕೆ ತೆರಳಿದ ನಾರಾಯಣಗೌಡ, 101 ಈಡುಗಾಯಿ ಒಡೆದು, ಬೆಟ್ಟದ ಮೇಲೆ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿ ರಥ ಎಳೆದು ಹರಕೆ ತೀರಿಸಿದರು. ಇದೇ ವೇಳೆ ಅವರು ತಮ್ಮ ಕುಟುಂಬ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಹೆಸರಲ್ಲಿ ಅರ್ಚನೆ ಮಾಡಿಸಿದರು. ನಾರಾಯಣಗೌಡಗೆ ಪತ್ನಿ ಹಾಗೂ ಬೆಂಬಲಿಗರು ಸಾಥ್ ನೀಡಿದರು.
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ನಾರಾಯಣಗೌಡ, ಡಿಸಿಎಂ ಹುದ್ದೆ ಬಗ್ಗೆ ತಕರಾರು ಇಲ್ಲ. 12 ಮಂದಿಯಲ್ಲಿ ಒಬ್ಬರಿಗೆ ಡಿಸಿಎಂ ಸ್ಥಾನ ಸಿಗುತ್ತೆ. ನನಗೆ ಸಚಿವ ಸ್ಥಾನ ಸಿಗುತ್ತೆ ಆದರೆ ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ ಎಂದ ಅವರು, ಸೋತವರಿಗೂ ಸ್ಥಾನಮಾನ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯ ಜಿಲ್ಲೆ ಅಭಿವೃದ್ಧಿ ಬಗ್ಗೆ ಯಡಿಯೂರಪ್ಪ ವಿಶೇಷ ಕಾಳಜಿ ವಹಿಸಲಿದ್ದಾರೆ. ಮಂಡ್ಯ ಜಿಲ್ಲೆ ಸಕ್ಕರೆ ಕಾರ್ಖಾನೆಗಳ ಪುನರಾರಂಭಕ್ಕೆ ಆದ್ಯತೆ ನೀಡಲಾಗುವುದು ಎಂದರು.