ಮೈಸೂರು: ನಗರದ ಕೆ.ಆರ್ ವೃತ್ತದಲ್ಲಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆ ಪ್ರತಿಮೆ ಸ್ಥಳಕ್ಕೆ ಇತಿಹಾಸ ತಜ್ಞ ಡಾ. ರಂಗರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಲ್ಲಿನಲ್ಲಿರುವ ದೋಷದಿಂದ ಸಣ್ಣ ಪ್ರಮಾಣದ ಬಿರುಕು ಪ್ರತಿಮೆಯಲ್ಲಿ ಕಂಡಿದೆ. ನಗರ ಪ್ರಮುಖ ವೃತ್ತ ಇದಾಗಿರೋದ್ರಿಂದ ಇಲ್ಲಿ ವಾಹನ ದಟ್ಟಣೆ ಹೆಚ್ಚು. ಇದರಿಂದಾಗಿ ಕಾರ್ಬನ್ ಡೈಆಕ್ಸೈಡ್, ಮಾನಾಕ್ಸೈಡ್ ಇದೇಲ್ಲಾ ಸೇರಿ ಶಿಲ್ಪ ಹಾಳಾಗ್ತಿದೆ ಎಂದು ಪುರಾತತ್ವ ತಜ್ಞ ಪ್ರೋ. ರಂಗರಾಜು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯಲ್ಲಿ ಬಿರುಕು – ಪಾಲಿಕೆ, ಜಿಲ್ಲಾಡಳಿತ ಮೇಲೆ ನಿರ್ಲಕ್ಷ್ಯದ ಆರೋಪ
ಪ್ರತಿಮೆಯಲ್ಲಿ ಕತ್ತಿನ ಭಾಗಕ್ಕೆ ಬಳಸಿರುವ ಶಿಲೆ ಉತ್ತಮ ಗುಣಮಟ್ಟದ್ದಲ್ಲ. ಹೀಗಾಗಿ ಪದೇ ಪದೇ ಅದು ಹಾಳಾಗುತ್ತಿದೆ. ಸದ್ಯ ಪ್ರತಿಮೆಗೆ ಸಣ್ಣ ಪ್ರಮಾಣದ ಬಿರುಕು ಇರುವುದರಿಂದ ಹೆಚ್ಚಿನ ಆತಂಕ ಇಲ್ಲ ಎಂದರು. ಬೇಸಿಗೆಯಲ್ಲಿ ಇದರ ಬಗ್ಗೆ ಹೆಚ್ಚು ಆತಂಕ ಇಲ್ಲ ಆದರೆ ಮಳೆಗಾಲಕ್ಕೆ ಹೆಚ್ಚು ತೊಂದರೆ ಆಗುತ್ತೆ. ಹೀಗಾಗಿ ಮಳೆಗಾಲದ ಹೊತ್ತಿಗೆ ಪ್ರತಿಮೆ ಸಂರಕ್ಷಣೆ ಮಾಡಿದರೆ ಒಳಿತು ಎಂದು ಪುರಾತತ್ವ ತಜ್ಞರು ಹೇಳಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದ ನಂದಿ ವಿಗ್ರಹದಲ್ಲಿ ಬಿರುಕು!
ಈ ಹಿಂದೆ ಪ್ರತಿಮೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದರು. ಈ ಪ್ರತಿಮೆಯನ್ನು ಅಮೃತ ಶಿಲೆಯಲ್ಲಿ ನಿರ್ಮಿಸಲಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ನೆನಪಿನಾರ್ಥವಾಗಿ ಸರ್ ಎಂ. ವಿಶ್ವೇಶ್ವರಯ್ಯನವರು ಉದ್ಘಾಟಿಸಿದ್ದರು. ಆದರೆ ಈಗ ಪ್ರತಿಮೆಯ ಮುಖ ಹಾಗೂ ಕುತ್ತಿಗೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ಪಾಲಿಕೆ ಹಾಗೂ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿವೆ. ಪ್ರತಿಮೆ ಸರಿಪಡಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು.