ಮೈಸೂರು: ಸರ್ಕಾರಿ ಬಸ್ ಚಾಲಕನ ಬೇಜವಾಬ್ದಾರಿತನದಿಂದ ಮಗಳನ್ನು ನೋಡಲು ಹಾಸ್ಟೆಲ್‍ಗೆ ಹೋಗುತ್ತಿದ್ದ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಮುದ್ದಹಳ್ಳಿ ಸಮೀಪದ ಕಡುಬಿನ ಕಟ್ಟೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಚನ್ನಪಟ್ಟಣ ಗ್ರಾಮದ ಮಹಿಳೆ ಭಾಗ್ಯಮ್ಮ (30) ಮೃತ ದುರ್ದೈವಿ. ಕಡುಬಿನ ಕಟ್ಟೆ ಗೇಟ್ ಬಳಿಯಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳನ್ನು ಭೇಟಿ ಮಾಡಲು ಮೊರಾರ್ಜಿ ವಸತಿ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಭಾಗ್ಯಮ್ಮ ಸಂಪೂರ್ಣವಾಗಿ ಇಳಿಯುವ ಮುನ್ನವೇ ಚಾಲಕ ಬಸ್ ಚಲಾಯಿಸಿದ್ದಾನೆ. ಇದರಿಂದ ಭಾಗ್ಯಮ್ಮ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದ ಪರಿಣಾಮ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡಿನ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.