ಮೈಸೂರು: ಲೋಕಸಭಾ ಕ್ಷೇತ್ರ (Lok Sabha Election 2024) ಮೊದಲ ಸಾರ್ವತ್ರಿಕ ಚುನಾವಣೆಯಿಂದಲೂ ಅಸ್ತಿತ್ವದಲ್ಲಿದೆ. ಈವರೆಗೆ ನಡೆದಿರುವ 17 ಚುನಾವಣೆಗಳ ಪೈಕಿ 13 ರಲ್ಲಿ ಕಾಂಗ್ರೆಸ್ ಹಾಗೂ ನಾಲ್ಕು ಬಾರಿ ಬಿಜೆಪಿ ಜಯಭೇರಿ ಬಾರಿಸಿವೆ. ಆದರೆ ಹಳೆಯ ಮೈಸೂರು (Mysuru) ಸೀಮೆಯಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿರುವ ಜನತಾ ಪರಿವಾರ ಈವರೆಗೆ ಈ ಕ್ಷೇತ್ರದಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ.
28 ವರ್ಷಗಳಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಹೋರಾಟ ನಡೆಯುತ್ತಿತ್ತು. 2019 ರಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ನಡುವೆ ನೇರ ಹೋರಾಟ. ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ ಮೈತ್ರಿಕೂಟ ಹೊಂದಾಣಿಕೆ ಮಾಡಿಕೊಂಡು ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಇದಕ್ಕೆ ಕಾರಣ. 1962 ರಿಂದ ಮೈಸೂರು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಾದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹೆಚ್.ಡಿ. ಕೋಟೆ, ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್. ನಗರಕ್ಕೆ ಸೀಮಿತವಾಗಿದ್ದ ಕ್ಷೇತ್ರ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಪ್ರಕರಣ; ಇದು ಯಾರಾದ್ರೂ ನಂಬುವ ಮಾತಾ?: ಉಮೇಶ್ ಜಾಧವ್ ವಾಗ್ದಾಳಿ
Advertisement
2009 ರಿಂದ ಮೈಸೂರಿನ ಆರು ಹಾಗೂ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕೊಡಗು ಜಿಲ್ಲೆ ಮುಂಚೆ ಮಂಗಳೂರು ಕ್ಷೇತ್ರಕ್ಕೆ ಸೇರಿತ್ತು. 1952 ರಲ್ಲಿ ಕಿಸಾನ್ ಮಜೂರ್ ಪ್ರಜಾಪಾರ್ಟಿಯ (ಕೆಎಂಪಿಪಿ) ಎಂ.ಎಸ್. ಗುರುಪಾದಸ್ವಾಮಿ ಗೆದ್ದಿದ್ದನ್ನು ಹೊರತುಪಡಿಸಿದರೆ 1996 ರವರೆಗೆ ಮೈಸೂರು ಕಾಂಗ್ರೆಸ್ಸಿನ ಭದ್ರಕೋಟೆ. 1998, 2004, 2014, 2019 ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಬಿಜೆಪಿ ಛಿದ್ರ ಮಾಡಿ, ‘ಕಮಲ’ ಅರಳಿಸಿದೆ. 1998 ರಿಂದ 2014 ರವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಣ್ಣಾಮುಚ್ಚಾಲೆ ನಡೆದಿದೆ. ಒಂದು ಬಾರಿ ಬಿಜೆಪಿ, ಮತ್ತೊಂದು ಬಾರಿ ಕಾಂಗ್ರೆಸ್ ಎಂಬಂತೆ ಈ ನಾಲ್ಕು ಅವಧಿಯಲ್ಲಿ ಫಲಿತಾಂಶ ಬಂದಿತ್ತು. ಆದರೆ 2019 ರಲ್ಲಿ ಬಿಜೆಪಿ ಸತತ ಎರಡನೇ ಗೆಲವು ದಾಖಲಿಸಿತು.
Advertisement
Advertisement
ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 1984 ರಲ್ಲಿ ರಾಜಕಾರಣ ಪ್ರವೇಶ ಮಾಡಿದ ನಂತರ ರಾಜರ ಕೋಟೆಯಾಗಿತ್ತು. ಕಾಂಗ್ರೆಸ್ ಹಾಗೂ ರಾಜರ ಕೋಟೆಗೆ ಲಗ್ಗೆ ಹಾಕುವುದರಲ್ಲಿ ಬಿಜೆಪಿ ನಾಲ್ಕು ಬಾರಿ ಯಶಸ್ವಿಯಾಗಿದೆ. 1998 ರವರೆಗೆ ಆ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಠೇವಣಿಯೂ ಸಿಗುತ್ತಿರಲಿಲ್ಲ ಎಂಬುದು ಗಮನಾರ್ಹ. ತೋಂಟದಾರ್ಯ ಕಾಯಂ ಅಭ್ಯರ್ಥಿ ಎಂಬಂತೆ ಆಗಿದ್ದರು. ಸಿದ್ದರಾಮಯ್ಯ, ಶ್ರೀನಿವಾಸಪ್ರಸಾದ್ ಅವರಂಥ ಘಟಾನುಘಟಿ ನಾಯಕರಿದ್ದಾಗಲೂ ಜನತಾ ಪರಿವಾರ ಈ ಕ್ಷೇತ್ರದಲ್ಲಿ ಈವರೆಗೆ ಖಾತೆ ತೆರೆದಿಲ್ಲ. 1996 ರವರೆಗೆ ಆ ಪಕ್ಷಕ್ಕೆ ಎರಡನೇ ಸ್ಥಾನ ಕಾಯಂ. 1998, 1999, 2009 ಹಾಗೂ 2014 ರಲ್ಲಿ ತೃತೀಯ ಸ್ಥಾನಕ್ಕೆ ಕುಸಿಯಿತು. 1984 ರಲ್ಲಿ ಪ್ರಬಲ ಪೈಪೋಟಿ ನೀಡಿತ್ತು. 1996, 2004 ರಲ್ಲಿ ಕ್ರಮವಾಗಿ ಜನತಾ ಪರಿವಾರದ ಜಿ.ಟಿ. ದೇವೇಗೌಡ, ಎ.ಎಸ್, ಗುರುಸ್ವಾಮಿ ಜಯದ ಹೊಸ್ತಿಲಿಗೆ ಬಂದು, ಸೋತರು. ಇದನ್ನೂ ಓದಿ: ‘ಲೋಕ’ಸಮರಕ್ಕೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ – ಮಂಡ್ಯದಲ್ಲಿ ಕುಮಾರಸ್ವಾಮಿ, ಕೋಲಾರದಿಂದ ಮಲ್ಲೇಶ್ ಬಾಬು
Advertisement
ಈವರೆಗೆ ಗೆದ್ದಿರುವವರು
1952- ದ್ವಿಸದಸ್ಯ ಕ್ಷೇತ್ರ- ಎಂ.ಎಸ್. ಗುರುಪಾದಸ್ವಾಮಿ (ಕೆಎಂಪಿಪಿ), ಎನ್. ರಾಚಯ್ಯ ( ಕಾಂಗ್ರೆಸ್)
1957- ದ್ವಿಸದಸ್ಯ ಕ್ಷೇತ್ರ- ಎಂ. ಶಂಕರಯ್ಯ, ಎಸ್.ಎಂ. ಸಿದ್ದಯ್ಯ (ಇಬ್ಬರೂ ಕಾಂಗ್ರೆಸ್)
1962- ಎಂ. ಶಂಕರಯ್ಯ ( ಕಾಂಗ್ರೆಸ್)
1967- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
1971- ಎಚ್.ಡಿ. ತುಳಸಿದಾಸ್ ( ಕಾಂಗ್ರೆಸ್)
1977- ಎಚ್.ಡಿ. ತುಳಸಿದಾಸ್ (ಕಾಂಗ್ರೆಸ್)
1980- ಎಂ. ರಾಜಶೇಖರಮೂರ್ತಿ (ಕಾಂಗ್ರೆಸ್-ಐ)
1984- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
1989- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1991- ಚಂದ್ರಪ್ರಭ ಅರಸು ( ಕಾಂಗ್ರೆಸ್)
1996- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (ಕಾಂಗ್ರೆಸ್)
1998- ಸಿ.ಎಚ್. ವಿಜಯಶಂಕರ್ (ಬಿಜೆಪಿ)
1999- ಶ್ರೀಕಂಠದತ್ತನರಸಿಂಹರಾಜ ಒಡೆಯರ್ ( ಕಾಂಗ್ರೆಸ್)
2004- ಸಿ.ಎಚ್. ವಿಜಯಶಂಕರ್ (ಬಿಜೆಪಿ)
2009- ಎಚ್. ವಿಶ್ವನಾಥ್ (ಕಾಂಗ್ರೆಸ್)
2014- ಪ್ರತಾಪ್ ಸಿಂಹ (ಬಿಜೆಪಿ)
2019 – ಪ್ರತಾಪ್ ಸಿಂಹ (ಬಿಜೆಪಿ)