– ಕೆ.ಪಿ.ನಾಗರಾಜ್
ಮೈಸೂರು: ಲೋಕಸಭೆಗೆ (Mysuru Lok Sabha 2024) ಎಂಟನೇ ಸಾರ್ವತ್ರಿಕ ಚುನಾವಣೆಯು 1984 ರಲ್ಲಿ ನಡೆಯಿತು. ಆಗ ಮೈಸೂರು ಸಾಮಾನ್ಯ ಕ್ಷೇತ್ರದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಮೊದಲ ಬಾರಿ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಗೆದ್ದರು.
ಮೈಸೂರಿನಲ್ಲಿ 7,51,631 ಮತದಾರರ ಪೈಕಿ ಶೇ.61.74 ಅಂದರೆ 4,64,072 ಮಂದಿ ಮತ ಚಲಾಯಿಸಿದ್ದರು. ಸ್ವೀಕೃತ ಮತಗಳು- 4,52,885. ಅದರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ 2,47,754 ಮತಗಳನ್ನು ಪಡೆದು ಸಂಸತ್ ಪ್ರವೇಶಿಸಿದರು. ಇದನ್ನೂ ಓದಿ: Mysuru Lok Sabha 2024: ಸಿಎಂಗೆ ಪ್ರತಿಷ್ಠೆ; ಬಿಜೆಪಿಗೆ ಹ್ಯಾಟ್ರಿಕ್ ನಿರೀಕ್ಷೆ – ಮೈಸೂರು-ಕೊಡಗು ಕ್ಷೇತ್ರ ಯಾರ ಕೈಗೆ?
Advertisement
ಜನತಾಪಕ್ಷದ ಬೆಂಬಲದಿಂದ ಕಣಕ್ಕಿಳಿದಿದ್ದ ಅಂದಿನ ಹನೂರು ಶಾಸಕ ಕೆ.ಪಿ. ಶಾಂತಮೂರ್ತಿ 1,83,144 ಮತಗಳು, ಜನತಾಪಕ್ಷದ ಪಿ. ವಿಶ್ವನಾಥ್- 5,696 ಮತಗಳನ್ನು ಪಡೆದಿದ್ದರು.
Advertisement
ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮಣಿಸಲು ಜನತಾಪಕ್ಷವು ನಗರದ ಪ್ರಪ್ರಥಮ ಮೇಯರ್ ಎಂಬ ಹೆಗ್ಗಳಿಕೆ ಹೊಂದಿದ್ದ ಪಿ. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಿತ್ತು. ಅವರು ಶ್ರೀರಂಗಪಟ್ಟಣದಿಂದ ಒಂದು ಬಾರಿ, ಮೈಸೂರು ತಾಲೂಕಿನಿಂದ (ಈಗಿನ ಚಾಮುಂಡೇಶ್ವರಿ) ನಾಲ್ಕು ಬಾರಿ ಹಾಗೂ ಚಾಮರಾಜ ಕ್ಷೇತ್ರದಿಂದ ಒಂದು ಬಾರಿ-ಒಟ್ಟು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿ, ಹಲವಾರು ಖಾತೆಗಳ ಸಚಿವರಾಗಿದ್ದ ಕೆ. ಪುಟ್ಟಸ್ವಾಮಿ ಅವರ ಪುತ್ರ. ನಂತರ ಅವರ ಬದಲು ಅಂದು ಹನೂರು ಶಾಸಕರಾಗಿದ್ದ ಕೆ.ಪಿ. ಶಾಂತಮೂರ್ತಿ ಅವರನ್ನು ಕಣಕ್ಕಿಳಿಸಲಾಗಿತ್ತು.
Advertisement
Advertisement
ಆದರೆ ಆ ವೇಳೆಗೆ ‘ಬಿ’ ಫಾರಂ ವಿಶ್ವನಾಥ್ ಅವರ ಹೆಸರಿನಲ್ಲಿ ಸಲ್ಲಿಕೆಯಾಗಿದ್ದರಿಂದ ಅವರನ್ನು ಕಣದಿಂದ ನಿವೃತ್ತಗೊಳಿಸಿ, ಕೆ.ಪಿ. ಶಾಂತಮೂರ್ತಿ ಅವರನ್ನು ಜನತಾಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು. ಹೀಗಾಗಿ ಅವರಿಗೆ ಎರಡೆಲೆ ಚಿಹ್ನೆ ದೊರೆತಿತ್ತು. ಈ ಚುನಾವಣೆಯಲ್ಲಿ ‘ಅರಮನೆ’ ಹಾಗೂ ‘ಗುಡಿಸಲು’ ನಡುವೆ ಹೋರಾಟ ಎಂದೇ ಪ್ರಚಾರ ಮಾಡಲಾಗಿತ್ತು. ಇದನ್ನೂ ಓದಿ: ನೀವು ಅರಮನೆಗೆ ಬರಬೇಕಿಲ್ಲ, ನಾನೇ ಹೊರಗೆ ಬರ್ತೀನಿ, ಸಾಮಾನ್ಯನಂತೆ ಕೆಲಸ ಮಾಡ್ತೀನಿ: ಯದುವೀರ್
ಆದರೆ ಇಂದಿರಾ ಗಾಂಧಿ (Indira Gandhi) ಅವರ ಹತ್ಯೆಯ ನಂತರ ನಡೆದ ಈ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 24 ರಲ್ಲಿ ಕಾಂಗ್ರೆಸ್ ಗೆದ್ದಿತು. ಬೆಂಗಳೂರು ದಕ್ಷಿಣ- ವಿ.ಎಸ್. ಕೃಷ್ಣಯ್ಯರ್, ಮಂಡ್ಯ- ಕೆ.ವಿ. ಶಂಕರಗೌಡ, ಕೋಲಾರ- ಡಾ.ವಿ. ವೆಂಕಟೇಶ್ ಹಾಗೂ ಬಿಜಾಪುರ- ಎಸ್.ಎಂ. ಗುರೆಡ್ಡಿ- ಈ ನಾಲ್ಕು ಕಡೆ ಮಾತ್ರ ಜನತಾಪಕ್ಷ ಗೆದ್ದಿತು.