ಮೈಸೂರು-ಕುಶಾಲನಗರ ರೈಲ್ವೇ ಯೋಜನಾ ವೆಚ್ಚ 3168.77 ಕೋಟಿ ರೂ.ಗೆ ಏರಿಕೆ!

Public TV
2 Min Read
Kushalnagar Train Track

– ತಲೆ ಎತ್ತಲಿವೆ 10 ರೈಲ್ವೇ ನಿಲ್ದಾಣಗಳು, 4 ಸೇತುವೆಗಳು; ಅಂತಿಮ ಲೊಕೆಷನ್‌ ಸಮೀಕ್ಷೆ ಮುಕ್ತಾಯ

ಮಡಿಕೇರಿ: ಕೊಡಗು ಜಿಲ್ಲೆಯ ಜನರ ಬಹು ನಿರೀಕ್ಷಿತ ರೈಲ್ವೇ (Mysuru Kushalnagar Train Track) ಯೋಜನೆಯ ಫೈನಲ್ ಲೊಕೇಷನ್ ಸರ್ವೆ ಕಾರ್ಯವು ಮುಕ್ತಾಯಗೊಂಡಿದ್ದು ಅದನ್ನು ದೆಹಲಿಯ ರೈಲ್ವೇ ಮಂಡಳಿಗೆ ಸಲ್ಲಿಸಬೇಕಾಗಿದೆ.

ಕಳೆದ ಒಂದು ದಶಕದಿಂದಲೂ ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮೊದಲಿಗೆ 1,682 ಕೋಟಿ ರೂ. ಅಂದಾಜು ವೆಚ್ಚ ನಿಗದಿ ಪಡಿಸಲಾಗಿತ್ತು. ನಂತರ ಯೋಜನಾ ವೆಚ್ಚ 1,839 ಕೋಟಿ ರೂ.ಗೆ ಏರಿಕೆಯಾಗಿತ್ತು. ಇದೀಗ ಕೇಂದ್ರ ಸರ್ಕಾರದ (Union Government) ನೂತನ ಮಾನದಂಡಕ್ಕೆ ಅನುಗುಣವಾಗಿ 89 ಕಿಮೀ ರೈಲು ಮಾರ್ಗದ ಯೋಜನಾ ವೆಚ್ಚ 3,168.77 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಮೈಸೂರು ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Kushalnagar Train Track 4

ಎರಡು ವರ್ಷಗಳ ಹಿಂದೆಯೇ ಫೈನಲ್ ಲೊಕೇಷನ್ ಸರ್ವೆ ನಡೆಸಲಾಗಿತ್ತು. ಆದ್ರೆ ತಾಂತ್ರಿಕ ಕಾರಣಗಳಿಂದ ಹಿಂತಿರುಗಿಸಲಾಗಿತ್ತು. ಈ ನಡುವೆ ಕೇಂದ್ರ ಸರ್ಕಾರವು ನೂತನ ರೈಲ್ವೇ ಹಳಿ ನಿರ್ಮಾಣ ಮಾಡಬೇಕಾದರೆ ಗರಿಷ್ಟ ಘಂಟೆಗೆ 165 ಕಿಮೀ ವೇಗದಲ್ಲಿ ರೈಲು ಚಾಲನೆಗೆ ಅವಕಾಶವಿರುವಂತೆ ಯೋಜನೆ ರೂಪಿಸುವಂತೆ ನಿಯಮಾವಳಿ ರೂಪಿಸಿತ್ತು. ಈ ಹಿಂದೆ ಘಂಟೆಗೆ 100 ಕಿಮೀ ವೇಗದಲ್ಲಿ ಚಾಲನೆಗೆ ಯೋಜನೆ ರೂಪಿಸಲಾಗಿತ್ತು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಮಿಸ್‌ ಇಂಡಿಯಾ ತಾರೆ 28ನೇ ವಯಸ್ಸಿಗೆ ಸಾವು!

Kushalnagar Train Track 2

ಈ ನಡುವೆ ಮೈಸೂರಿನಿಂದ ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ 4 ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವೂ ಆಗಲಿರುವ ಹಿನ್ನೆಲೆಯಲ್ಲಿ ಈ ಹೆದ್ದಾರಿಗೆ ರೈಲ್ವೇ ಇಲಾಖೆಯಿಂದ 4 ಸೇತುವೆ ನಿರ್ಮಿಸುವುದೂ ಯೋಜನೆಯಲ್ಲಿ ಸೇರಿದೆ. ಹುಣಸೂರು ಸಮೀಪ ಒಂದು ಸಣ್ಣ ಹೊಳೆಗೆ ಸೇತುವೆ, ಎರಡು ಅಂಡರ್ ಪಾಸ್ ಗಳು ಮತ್ತು ಒಂದು ಫ್ಲೈಒವರ್‌ ಹೊಸದಾಗಿ ಸೇರ್ಪಡೆಯಾಗಿದೆ. ಇದಕ್ಕಾಗಿ 68 ಕೋಟಿ ರೂ.ಗಳು ಹೆಚ್ಚುವರಿ ವೆಚ್ಚ ತಗುಲಲಿದೆ. ಇದಲ್ಲದೆ 89 ಕಿಮೀ ಉದ್ದದ ಮಾರ್ಗಕ್ಕೆ ಒಟ್ಟು 10 ನಿಲ್ದಾಣಗಳೂ ಬರಲಿವೆ.

ಬೆಳಗೊಳ, ಬೆಟ್ಟದೂರು, ಹಂದನಹಳ್ಳಿ, ತಿಪ್ಪೂರು, ಹುಣಸೂರು, ಕಲ್ಲಳ್ಳಿ, ಪಿರಿಯಾಪಟ್ಟಣ, ಚಿಕ್ಕ ಮಾಗಳಿ, ಮಂಚದೇವನ ಹಳ್ಳಿ ಹಾಗೂ ಕುಶಾಲನಗರದಲ್ಲಿ ರೈಲ್ವೇ ನಿಲ್ದಾಣಗಳ ನಿರ್ಮಾಣ ಆಗಲಿದೆ. ಕುಶಾಲನಗರದ ಸೇತುವೆಯಿಂದ 3 ಕಿಮೀ ಗಳಷ್ಟು ಎಡಭಾಗಕ್ಕೆ ಕಾವೇರಿ ನಿಸರ್ಗ ಧಾಮದ ಸಮೀಪ ರೈಲ್ವೇ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ರೈಲ್ವೇ ಅಧಿಕಾರಿ ತಿಳಿಸಿದ್ದಾರೆ. ಹಿಂದಿನ ಯೋಜನೆ ಪ್ರಕಾರ ಈ ನಿಲ್ದಾಣ ಹೆದ್ದಾರಿಯ ಒಂದು ಫರ್ಲಾಂಗ್ ದೂರದಲ್ಲಿಯೇ ನಿರ್ಮಾಣ ಆಗಬೇಕಿತ್ತು. ಆದರೆ ಭವಿಷ್ಯದ ಅಭಿವೃದ್ದಿಯ ದೃಷ್ಟಿಯಿಂದ 3 ಕಿಮಿ ಒಳ ಭಾಗಕ್ಕೆ ಸ್ಥಳಾಂತರಿಸಲಾಗಿದೆ.

Kushalnagar Train Track 3

ಉದ್ದೇಶಿತ ರೈಲ್ವೇ ನಿಲ್ದಾಣಗಳ ಒಂದೂವರೆ ಕಿಮೀ ಉದ್ದಕ್ಕೂ ಸುಮಾರು 100 ಮೀಟರ್‌ಗಳವರೆಗೆ ಮತ್ತು ರೈಲ್ವೇ ಹಳಿ ಹಾದು ಹೋಗುವ ಸ್ಥಳದಲ್ಲಿ 25 ಮೀಟರ್ ಗಳಷ್ಟು ಭೂಸ್ವಾಧೀನ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಎರಡು ಟ್ರ್ಯಾಕ್‌ ಗಳು ನಿರ್ಮಾಣ ಆಗಲಿವೆ. ಈ ಉದ್ದೇಶಿತ ಯೋಜನೆಗೆ ರಾಜ್ಯ ಸರ್ಕಾರವು ಭೂ ಸ್ವಾಧೀನ ಮಾಡಿಕೊಡಬೇಕಾಗಿದ್ದು ಯೋಜನೆಯನ್ನು ಎರಡೂ ಸರ್ಕಾರಗಳು 50% ನಷ್ಟು ವೆಚ್ಚದಲ್ಲಿ ಅನುಷ್ಠಾನಗೊಳಿಸಬೇಕಿದೆ. ಇದನ್ನೂ ಓದಿ: WPL 2024: ಆರ್‌ಸಿಬಿಯಲ್ಲಿ ಲೇಡಿ ʻಎಬಿಡಿʼ – ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ಟ್ರೆಂಡ್‌!

ಈಗ ಫೈನಲ್ ಲೊಕೇಷನ್ ಸರ್ವೆ ಪೂರ್ಣಗೊಂಡಿದ್ದು ಮೈಸೂರಿನಿಂದ ಹುಬ್ಬಳ್ಳಿಯ ನೈರುತ್ಯ ರೈಲ್ವೇಯ ಕೇಂದ್ರ ಕಚೇರಿಗೆ ಜನರಲ್‌ ಮ್ಯಾನೇಜರ್ ಅವರ ಕಚೇರಿಗೆ ಹೋಗಿ ನಂತರ ಅಲ್ಲಿಂದ ದೆಹಲಿಯ ರೈಲ್ವೇ ಮಂಡಳಿಗೆ ಕಳಿಸಿಕೊಡಲಾಗುತ್ತದೆ. ರೈಲ್ವೇ ಮಂಡಳಿ ಅನುಮೋದನೆ ನೀಡಿದ ಕೂಡಲೇ ಕೆಲಸ ಪ್ರಾರಂಭವಾಗಲಿದೆ.

Share This Article