Connect with us

Karnataka

ಕೊಡಗು, ಮೈಸೂರು ನಡುವೆ 8 ಪಥದ ರಸ್ತೆ – ಶೀಘ್ರವೇ ಕಾಮಗಾರಿ ಆರಂಭ

Published

on

– 3,120 ಕೋಟಿ ರೂ. ವೆಚ್ಚದ ಕಾಮಗಾರಿ
– ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪ್ರತಾಪ್ ಸಿಂಹ

ಮೈಸೂರು: ಮೈಸೂರು-ಬೆಂಗಳೂರು ನಡುವೆ 10 ಪಥದ ರಸ್ತೆ ಮಾಡುತ್ತಿದ್ದೇವೆ. ಅದೇ ರೀತಿ ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿಯನ್ನು 8 ಪಥದ ರಸ್ತೆ ಮಾಡಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಅವರು ಮೈಸೂರು-ಬೆಂಗಳೂರು ಹಾಗೂ ಮೈಸೂರು-ಕೊಡಗು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಾಹಿತಿ ನೀಡಿದರು. ಮೈಸೂರು-ಬೆಂಗಳೂರು ನಡುವೆ 10 ಪಥದ ರಸ್ತೆ ಮಾಡುತ್ತಿದ್ದೇವೆ. ಈ ಯೋಜನೆಯ ಒಟ್ಟು ಮೊತ್ತ 7,400 ಕೋಟಿ ರೂ. ಆಗಿದೆ. 6 ಪಥದ ರಸ್ತೆ ಎಕ್ಸ್‍ಪ್ರೆಸ್ ಹೈವೇ ಆಗಲಿದ್ದು, ಉಳಿದ ಎರಡು ಪಥ ರಸ್ತೆ ಸರ್ವಿಸ್ ರಸ್ತೆ ಆಗಲಿದೆ ಎಂದು ತಿಳಿಸಿದರು.

ರಸ್ತೆ ಅಗಲೀಕರಣದಿಂದಾಗಿ ಮೈಸೂರು-ಬೆಂಗಳೂರು ನಡುವೆ ಇರುವ 3 ಗಂಟೆ ಪ್ರಯಾಣ ಅವಧಿ 1.5 ಗಂಟೆಗೆ ಇಳಿಯಲಿದೆ. ಜೊತೆಗೆ ಮೈಸೂರು ಬೆಂಗಳೂರು ನಡುವೆ 118 ಕಿಲೋ ಮೀಟರ್ ಮಾತ್ರ ಪ್ರಯಾಣ ಇರಲಿದೆ ಎಂದು ವಿವರಿಸಿದರು.

ಇದೇ ರೀತಿ ಮೈಸೂರು-ಕೊಡಗು ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯಲಿದೆ. ಇಲ್ಲಿಯೂ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದ್ದು, 93 ಕಿಲೋಮೀಟರ್ ರಸ್ತೆಯನ್ನು 84 ಕಿ.ಮೀ.ಗೆ ಇಳಿಸಲಾಗುವುದು. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮೈಸೂರು-ಕೊಡಗು ಯೋಜನೆ ಮೊತ್ತ 3,120 ಕೋಟಿ ರೂ. ಆಗಿದೆ. ಅಲ್ಲದೆ ಈ ರಾಷ್ಟ್ರೀಯ ಹೆದ್ದಾರಿ ಮೈಸೂರು ನಗರದೊಳಗೆ ಹಾದು ಹೋಗುವುದಿಲ್ಲ. ಹೀಗಾಗಿ ಸಮಯ ಹಾಗೂ ಪ್ರಯಾಣದ ದೂರ ಕಡಿಮೆಯಾಗಲಿದೆ ಎಂದು ಹೇಳಿದರು.

ಈ ಎರಡು ರಸ್ತೆಗಳಿಂದ ಮೈಸೂರು ಹಾಗೂ ಕೊಡಗು ಎರಡೂ ಜಿಲ್ಲೆಗಳು ಅಭಿವೃದ್ಧಿ ಆಗಲಿವೆ. ಈ ಎರಡು ಯೋಜನೆಗಳು 2021ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತವೆ. ಅಲ್ಲದೆ ಈ ಯೋಜನೆಗಳು ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾಗಿದ್ದು, ಕಾಮಗಾರಿ ಅಷ್ಟೇ ವೇಗದಿಂದ ನಡೆಯಲಿದೆ ಎಂದರು.

Click to comment

Leave a Reply

Your email address will not be published. Required fields are marked *