ಮೈಸೂರು: ಹುಣಸೂರು ಉಪ ಚುನಾವಣೆಯ ಗೆಲುವಿಗೆ ಮೂರು ಪಕ್ಷಗಳು ನಾನಾ ಲೆಕ್ಕಾಚಾರ ಹಾಕುತ್ತಿವೆ. ಆದರೆ, ಈ ಲೆಕ್ಕಾಚಾರದ ನಡುವೆ ಎಲ್ಲರ ಚಿತ್ತ ಮಾಜಿ ಸಚಿವ ಜಿ.ಟಿ. ದೇವೇಗೌಡರ ಮೇಲೆ ನೆಟ್ಟಿದೆ. ಜಿಟಿಡಿ ಸದ್ಯಕ್ಕೆ ನಾನು ಮೌನ ಅಂತಿದ್ದಾರೆ. ಈ ಮೌನ ಯಾರಿಗೆ ಲಾಭ ಕೊಡುತ್ತೆ, ಯಾರಿಗೆ ನಷ್ಟ ಉಂಟು ಮಾಡುತ್ತೆ ಎಂಬ ಚರ್ಚೆ ಬಿರುಸು ಪಡೆದಿದೆ.
ಹುಣಸೂರು ಉಪ ಚುನಾವಣೆಯಲ್ಲಿ ಕಣಕ್ಕೆ ಬಿಜೆಪಿಯಿಂದ ತಮ್ಮ ಪುತ್ರ ಹರೀಶ್ ಗೌಡನನ್ನು ಕಣಕ್ಕೆ ಇಳಿಸಲು ಜಿಟಿಡಿ ನಡೆಸಿದ ಯತ್ನ ಈಗ ಗುಟ್ಟಾಗಿ ಉಳಿದಿಲ್ಲ. ಯಾವಾಗ ಎಚ್. ವಿಶ್ವನಾಥ್ ತಾವೇ ಕಣಕ್ಕೆ ಇಳಿಯುವ ನಿರ್ಧಾರ ಪ್ರಕಟಿಸಿ ಅವರ ಇಚ್ಛೆಯಂತೆ ಬಿಜೆಪಿ ಕೂಡ ಅವರಿಗೆ ಟಿಕೆಟ್ ನೀಡಿತೋ ಆ ಕ್ಷಣವೇ ಜಿಟಿಡಿ ಪ್ಲಾನ್ ಉಲ್ಟಾ ಆಯಿತು. ಆಗಲೇ ಅವರು ನನಗೂ ಈ ಚುನಾವಣೆಗೂ ಸಂಬಂಧ ಇಲ್ಲ ಅಂತ ಘೋಷಿಸಿದರು. ಇದರಿಂದ ಪ್ರಮುಖವಾಗಿ ಬಿಜೆಪಿಗೆ ಟೆನ್ಷನ್ ಶುರುವಾಗಿದೆ.
Advertisement
Advertisement
ಜಿಟಿಡಿ ಮನಸ್ಸು ಮಾಡಿದರೆ ಹುಣಸೂರು ಚುನಾವಣೆಯ ಫಲಿತಾಂಶದ ದಿಕ್ಕನ್ನೇ ಬದಲಾಯಿಸಬಲ್ಲರು. ಅವರ ಪುತ್ರ ಹರೀಶ್ ಗೌಡ ಈ ಕ್ಷೇತ್ರದಲ್ಲಿ ತನ್ನದೇ ಆದ ಹಿಡಿತ ಸಾಧಿಸಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳನ್ನು ಪಕ್ಷ ಮೀರಿದಂತೆ ತಮ್ಮತ್ತ ಸೆಳೆಯುವ ಶಕ್ತಿ ಇದೆ. ಹೀಗಾಗಿ, ಜಿಟಿಡಿ ಮೌನದ ಹಿಂದೆ ಯಾವ ಸಂದೇಶ ಇದೆ ಅನ್ನೋದೇ ಅಭ್ಯರ್ಥಿಗಳ ನಿದ್ದೆಗೆಡ್ಡಿಸಿರೋದು.
Advertisement
ಜೆಡಿಎಸ್ ನಲ್ಲಿದ್ದರು ಬಿಜೆಪಿ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಹೊಂದಿರುವ ಜಿಟಿಡಿ, ಒಂದು ವೇಳೆ ಮೌನವಾಗಿಯೇ ಬಿಜೆಪಿ ಪರ ಬ್ಯಾಟಿಂಗ್ ಮಾಡಿದರೆ ಅದು ಬಿಜೆಪಿ ಅಭ್ಯರ್ಥಿಗೆ ಆಗುವ ದೊಡ್ಡ ಲಾಭ. ಒಂದು ವೇಳೆ ಅವರು ಬಿಜೆಪಿ ಪರ ಬ್ಯಾಟ್ ಮಾಡದೆ ನಿಜಕ್ಕೂ ಮೌನವಾಗಿ ಇದ್ದು ಬಿಟ್ಟರೆ ಅದು ಕಾಂಗ್ರೆಸ್ಸಿಗೆ ಆಗುವ ದೊಡ್ಡ ಲಾಭ. ಜಿಟಿಡಿ ಶಕ್ತಿಯನ್ನು ಎಚ್. ವಿಶ್ವನಾಥ್ ಸ್ಪಷ್ಟವಾಗಿ ಅರಿತಿದ್ದಾರೆ. ಹೀಗಾಗಿ, ಜಿಟಿಡಿ ಮನವೊಲಿಸೋ ಯತ್ನ ನಡೆಸಿದ್ದಾರೆ.