ಮೈಸೂರು: ಸರ್ಕಾರಿ ಅಧಿಕಾರಿಯೊಬ್ಬ ತನ್ನ ಪತ್ನಿಯನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಆರೋಪ ಕೇಳಿ ಬಂದಿತ್ತು. ಇದೀಗ ಆತನ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ಚಿಕಿತ್ಸೆ ಫಲಕಾರಿಯಾಗದೆ ನಾಗವೇಣಿ ಅಲಿಯಾಸ್ ಮಣಿ (41) ಸಾವು. ಪತಿ ವೆಂಕಟಪ್ಪ ಕಿರುಕುಳದಿಂದ ನಾಗವೇಣಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ವೆಂಕಟಪ್ಪ ಟಿ.ನರಸೀಪುರ ತಾಲೂಕಿನಲ್ಲಿ ಸಹಾಯಕ ಶಿಶುಯೋಜನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈತನೇ ನಮ್ಮ ಮಗಳನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ನಾಗವೇಣಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಪತ್ನಿ ಕೊಲ್ಲಲು ಯತ್ನಿಸಿದ ಸರ್ಕಾರಿ ಅಧಿಕಾರಿ- ಪೋಷಕರ ಆರೋಪ
ವೆಂಕಟಪ್ಪಗೆ 1997ರಲ್ಲಿ ನಾಗವೇಣಿಯನ್ನು ಮದುವೆ ಮಾಡಿಕೊಡಲಾಗಿತ್ತು. ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಈ ದಂಪತಿ ವಾಸವಿದ್ದರು. ಇತ್ತೀಚಿಗೆ ವೆಂಕಟಪ್ಪ ಮಾನಸಿಕ ಹಾಗೂ ದೈಹಿಕವಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಆದರೆ ಮಾರ್ಚ್ 3ರಂದು ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ಪೋಷಕರು ಆರೋಪ ಮಾಡಿದ್ದರು. ತಕ್ಷಣ ನಾಗವೇಣಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಂದಿನಿಂದ ನಾಗವೇಣಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.