ಮೈಸೂರು: ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ಅಕ್ಟೋಬರ್ 21ರಂದು ಬೈ ಎಲೆಕ್ಷನ್ ಘೋಷಣೆಯಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಮುರಿದಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸುವುದಾಗಿ ಘೊಷಣೆ ಮಾಡಿದ್ದಾರೆ.
ಉಪ ಚುನಾವಣೆ ಫಲಿತಾಂಶದ ಮೇಲೆ ರಾಜ್ಯದ ಮುಂದಿನ ರಾಜಕೀಯ ದಿಕ್ಕು ನಿರ್ಧಾರವಾಗುತ್ತದೆ. ಎಲ್ಲಾ ಕ್ಷೇತ್ರಗಳಿಗೆ ಸ್ವತಂತ್ರವಾಗಿ ಜೆಡಿಎಸ್ ಅಭ್ಯರ್ಥಿ ಹಾಕುತ್ತೇವೆ. ಹುಣಸೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲೇ ಬೇಕು. ನನ್ನ ಇಡೀ ಸಮಯವನ್ನು ಹುಣಸೂರು ಚುನಾವಣೆ ಗೆಲ್ಲಲು ನೀಡುತ್ತೇನೆ ಎಂದರು. ಇದನ್ನೂ ಓದಿ: ಅ.21ಕ್ಕೆ ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣದಲ್ಲಿ ಚುನಾವಣೆ – ಅ. 24ರಂದು ಫಲಿತಾಂಶ
ಕಾರ್ಯಕರ್ತರು ಉತ್ಸಾಹದಿಂದ ಹೊರಟರೆ ಯಾರ ಹಣ ಬಲವೂ ನಡೆಯಲ್ಲ. ಕೆಟ್ಟ ಸರ್ಕಾರದಲ್ಲಿ ನನಗೆ ಬೆಂಬಲ ಸರಿ ಇಲ್ಲದಿದ್ದಾಗಲೂ ರೈತರ ಪರ ಕೆಲಸ ಮಾಡಿದ್ದೇನೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಯಾರು ರೈತರ ಪರ ಇದ್ದಾರೆ ಅನ್ನೋದು ಜನ ಗಮನಿಸಲಿ. ಕೊಡಗು ಸ್ವಚ್ಛ ಮಾಡಿ ಅಂದರೆ ಮೈಸೂರನ್ನು ಸ್ವಚ್ಛ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಓಡಾಡುತ್ತಿದ್ದಾರೆ ಎಂದರು.
ಸಾಲ ಮನ್ನಾ ವಿಚಾರದಲ್ಲಿ ನನಗೆ ದೊಡ್ಡ ಪ್ರಚಾರ ದೊರಕಲಿಲ್ಲ. ಕೆಲಸ ಮಾಡಿದ್ದೇನೆ ಆದರೆ ಪ್ರಚಾರ ಸಿಗಲೇ ಇಲ್ಲ ಎಂದು ಎಚ್‍ಡಿಕೆ ಅಸಮಾಧಾನ ಹೊರಹಾಕಿದರು.