– ಹೆಚ್‍ಡಿಕೆ ಸೆಕೆಂಡ್ ಇನ್ನಿಂಗ್ಸ್ ಚೆನ್ನಾಗಿರಲಿಲ್ಲ
ಮೈಸೂರು: ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ ಎಂದು ಹೇಳುವ ಮೂಲಕ ಮಾಜಿ ಡಿಸಿಎಂ ಪರಮೇಶ್ವರ್ ಗೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್ ವಿಶ್ವನಾಥ್ ಟಾಂಗ್ ನೀಡಿದ್ದಾರೆ.
ಇಂದು ಹುಣಸೂರಿನಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಜೋಡೆತ್ತಿನ ರೀತಿ ಕೆಲಸ ಮಾಡಿದ್ದೇವೆ ಎಂಬ ಪರಮೇಶ್ವರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಜೋಡೆತ್ತುಗಳು ಕಿತ್ತುಕೊಂಡು ಹೋಗಿ ತಿಂಗಳಾಗಿವೆ. ಒಂದು ಏರಿಗೆ ಎಳೆದರೆ ಮತ್ತೊಂದು ನೀರಿಗೆ ಎಳೆಯುತ್ತಿದೆ ಎಂದು ಲೇವಡಿ ಮಾಡಿದರು.
ಪರಮೇಶ್ವರ್ ಗೆ ಕಾಂಗ್ರೆಸ್ ಮಾಡಿದ ಅಪಮಾನಕ್ಕೆ ಅವರು ಚುನಾವಣಾ ಪ್ರಚಾರಕ್ಕೆ ಬರಬಾರದು. ಅವರ ಕಪಾಳಕ್ಕೆ ಹೊಡೆದಂತೆ ಗೃಹ ಖಾತೆ ಕಿತ್ತುಕೊಳ್ಳಲಾಗಿತ್ತು. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದಾರೋ ಗೊತ್ತಿಲ್ಲ ಎಂದು ಪರಮೇಶ್ವರ್ ವಿರುದ್ಧ ಕಿಡಿಕಾರಿದರು.
ವಿಶ್ವನಾಥ್‍ಗೆ ಮಾನಸಿಕ ಗೊಂದಲ ಖಾಯಿಲೆ ಇದೆ ಎಂದು ಹೇಳಿದ್ದ ಮಾಜಿ ಸಚಿವ ಮಹದೇವಪ್ಪ ಅವರಿಗೆ ತಿರುಗೇಟು ನೀಡಿದ ವಿಶ್ವನಾಥ್, ಗೊಂದಲದ ಖಾಯಿಲೆ ನನಗಲ್ಲ ಮಹದೇವಪ್ಪಗೆ. ನಾನು ಆರಾಮಾಗಿ ಜನರ ಜೊತೆ ಇದ್ದೇನೆ. ಮಹದೇವಪ್ಪ ಸಚಿವನಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದರೆ ಅವರನ್ನು ಹೊಗಳುತ್ತಿದ್ದೆ. ನಾನು ಸುಖಾಸುಮ್ಮನೆ ಯಾರನ್ನು ಹೊಗಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮತ್ತೆ ದಳಪತಿಗಳ ಗುಣಗಾನ ಮಾಡಿದ ವಿಶ್ವನಾಥ್, 2006ರಲ್ಲಿ ಕುಮಾರಸ್ವಾಮಿ ಬೆಸ್ಟ್ ಸಿಎಂ. ಈಗಲೂ ನಾನು ಕುಮಾರಸ್ವಾಮಿ ಜೊತೆ ಚೆನ್ನಾಗಿದ್ದೇನೆ. ದೇವೇಗೌಡರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆದಾಗ ಈಗಲೂ ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ 2ನೇ ಇನ್ನಿಂಗ್ಸ್ ಚೆನ್ನಾಗಿರಲಿಲ್ಲ. ಅವರು ಒಳ್ಳೆಯ ಆಡಳಿತ ನೀಡಲು ಸಮ್ಮಿಶ್ರ ಸರ್ಕಾರ ಬಿಡಲಿಲ್ಲ ಎಂದು ದೂರಿದರು.