– ತಹಶೀಲ್ದಾರ್ ಗೆ ಎತ್ತಂಗಡಿ ಭೀತಿ
ಮೈಸೂರು: ಹಿಂದೂಗಳ ಆಕ್ರೋಶವನ್ನು ತಣಿಸಲು ನಂಜನಗೂಡಿನ ಹರದನಹಳ್ಳಿಯಲ್ಲಿ ತೆರವಾದ ಹುಚ್ಚಗಣಿ ಮಹದೇವಮ್ಮ ದೇವಾಲಯವನ್ನು ನೆಲಸಮವಾದ ಜಾಗದ ಪಕ್ಕದಲ್ಲೇ ಪುನರ್‍ನಿರ್ಮಿಸಲು ಸರ್ಕಾರ ಪ್ಲಾನ್ ಮಾಡುತ್ತಿದೆ. ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗಿರೋದ್ರಿಂದ ಗ್ರಾಮಸ್ಥರು ಹೇಳಿದ ಕಡೆಯಲ್ಲೇ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಆಲೋಚಿಸಿದೆ. ಈ ಸಂಬಂಧ ಸೆ.20ರಂದು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಹೊರಬೀಳುವ ಸಂಭವ ಇದೆ.
ಇತ್ತ ದೇವಸ್ಥಾನ ತೆರವುಗೊಳಿಸಿ ತೀವ್ರ ಟೀಕೆಗೆ ಗುರಿಯಾಗಿರೋ ತಹಶೀಲ್ದಾರ್ ಮೋಹನ್ ಕುಮಾರಿ ಎತ್ತಂಗಡಿ ಆಗೋ ಸಾಧ್ಯತೆಗಳು ಹೆಚ್ಚಿವೆ. ಇದರ ಬೆನ್ನಲ್ಲೇ ಸುತ್ತೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಕುತೂಹಲ ಕೆರಳಿಸಿದೆ. ಮಾಜಿ ಸಿಎಂ ಬಿಎಸ್‍ವೈ ಮಾತಾಡಿ, ದೇಗುಲ ತೆರವು ಮಾಡಿದ್ದು ತಪ್ಪು ಎಂದಿದ್ದಾರೆ. ಸಂಸದ ಪ್ರತಾಪ್ ಸಿಂಹ, ಇದು ಸರ್ಕಾರದ ತಪ್ಪಲ್ಲ. ಐಎಎಸ್ ಅಧಿಕಾರಿಗಳ ತಪ್ಪು ಎಂದು ದೂಷಿಸಿದ್ದಾರೆ.
ಸಿದ್ದರಾಮಯ್ಯಗೆ ದೇಗುಲಗಳ ಮೇಲೆ ಪ್ರೀತಿ ಇದ್ದಿದ್ರೆ ವಿಗ್ರಹಭಂಜಕ ಟಿಪ್ಪು ಜಯಂತಿ ಮಾಡ್ತಿರಲಿಲ್ಲ ಎಂದು ಕಿಡಿಕಾರಿದ್ದಾರೆ. ಧರ್ಮಕ್ಕೆ ನೋವಾದ್ರೇ ನಮಗೆ ಒಳ್ಳೆಯದಾಗಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅತ್ತ ದಕ್ಷಿಣ ಕನ್ನಡದಲ್ಲಿ ಯಾವುದೇ ಅನಧಿಕೃತ ದೇಗುಲವಿಲ್ಲ. ಒಂದು ವೇಳೆ ಇದ್ದರೂ ಅಧಿಕೃತಗೊಳಿಸಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಲಹೆ ನೀಡಿದ್ದಾರೆ. ಈ ಮಧ್ಯೆ, ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರು ಇದೇ ಪ್ರವೃತ್ತಿ ಮುಂದುವರಿಸಿದರೆ ಬೀದಿಯಲ್ಲಿ ಹೆಣ ಬೀಳಿಸ್ತೀವಿ ಎಂದು ದಾವಣಗೆರೆಯ ಹಿಂದೂ ಮುಖಂಡ ಸತೀಶ್ ಪೂಜಾರಿ ಬಹಿರಂಗವಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ದೇವಸ್ಥಾನದ ಮೇಲೆ ಪ್ರೀತಿ ಇದ್ದಿದ್ದರೆ ವಿಗ್ರಹ ಭಂಜಕ ಟಿಪ್ಪು ಜಯಂತಿ ಆಚರಿಸುತ್ತಿರಲಿಲ್ಲ: ಪ್ರತಾಪ್ ಸಿಂಹ
ಇನ್ನು ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಹಣ ತುಂಬಿಸಲು ದೇವಾಲಯಗಳು ಬೇಕು, ಆದರೆ ಅದೇ ದೇವಾಲಯಗಳ ಸಂರಕ್ಷಣೆ ವಿಚಾರದಲ್ಲಿ ಮಾತ್ರ ಸರ್ಕಾರದ್ದು ದಿವ್ಯ ನಿರ್ಲಕ್ಷ್ಯ. ಪರಿಣಾಮ ರಾಜ್ಯದಲ್ಲಿ ಹಿಂದೂ ದೇವಾಲಯಗಳಿಗೆ ಕಂಟಕ ಎದುರಾದಂತೆ ಕಾಣುತ್ತದೆ. ಹುಚ್ಚಗಣಿ ಮಹಾದೇವಮ್ಮ ದೇಗುಲ ಧ್ವಂಸ ಬೆನ್ನಲ್ಲೇ, ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಭದ್ರಕಾಳಿ ವಿಗ್ರಹವನ್ನು ಯಾರಿಗೂ ಮಾಹಿತಿ ನೀಡದೇ ಸ್ಥಳಾಂತರ ಮಾಡಲಾಗಿದೆ. ದೇಗುಲದ ಆವರಣದಲ್ಲಿರುವ ವೀರಭದ್ರಮೂರ್ತಿ ಪಕ್ಕದಲ್ಲೇ ಇದ್ದ ಭದ್ರಕಾಳಿಯ ವಿಗ್ರಹವನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ವಿಗ್ರಹವಿದ್ದ ಸ್ಥಳದಲ್ಲಿ ಹೋಮದ ಕುರುಹುಗಳು ಕಂಡುಬಂದಿವೆ. ಪ್ರತಿದಿನ ಪೂಜೆ ಪುನಸ್ಕಾರಗಳಿಗೆ ಒಳಪಡ್ತಿದ್ದ ಭದ್ರಕಾಳಿ ವಿಗ್ರಹವನ್ನು ದಿಢೀರ್ ಸ್ಥಳಾಂತರ ಮಾಡಿದ ಉದ್ದೇಶ ಏನು ಎಂಬ ಪ್ರಶ್ನೆ ಎದ್ದಿದೆ. ಭದ್ರಕಾಳಿ ವಿಗ್ರಹ ಭಿನ್ನವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ದೇಗುಲದ ಸಂರಕ್ಷಣೆ ಕಾರ್ಯ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಬೆನ್ನಲ್ಲೇ ಪುರಾತತ್ವ ಇಲಾಖೆ ಅನುಮತಿ ಪಡೆದು ಸರಿಪಡಿಸುತ್ತೇವೆ. ಅಷ್ಟಬಂಧನ ಮಾಡಿಸುತ್ತೇವೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳುತ್ತಿದೆ. ಇದನ್ನೂ ಓದಿ: ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ