ಮೈಸೂರು: ನಮ್ಮೂರಲ್ಲೊಂದು ಸಕ್ಕರೆ ಕಾರ್ಖಾನೆಯಾದರೆ ಉದ್ಯೋಗ ಸಿಗುತ್ತದೆ, ಜೊತೆಗೆ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬನ್ನು ಊರಿನಲ್ಲಿರುವ ಕಾರ್ಖಾನೆಗೆ ಕಳುಹಿಸಬಹುದು. ಕಾರ್ಖಾನೆಯಿಂದ ಬದುಕು ಹಸನಾಗುತ್ತದೆ ಅಂದು ಕೊಂಡವರಿಗೆ ಇದೀಗ ಆ ಕಾರ್ಖಾನೆ ಕುಡಿಯುವ ನೀರಿನ ಕಂಟಕ ತಂದಿಟ್ಟಿದೆ. ಜೊತೆಗೆ ಭೂಮಿಯಲ್ಲಿ ಬೆಳೆ ಬೆಳೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕಾರ್ಖಾನೆ ವಿರುದ್ಧವೇ ಗ್ರಾಮಸ್ಥರು ಬೀದಿಗಿಳಿದಿದ್ದಾರೆ.
Advertisement
ಹೌದು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅಳಗಂಚಿಪುರದಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಸ್ಥಳೀಯರಿಗೆ ಉದ್ಯೋಗವೇನೋ ಸಿಕ್ಕಿದೆ. ಕಬ್ಬು ಬೆಳೆಗಾರರಿಗೆ ಅನುಕೂಲವು ಆಗಿದೆ. ಆದರೆ ಈಗ ಈ ಕಾರ್ಖಾನೆಯಿಂದ ಜೀವಜಲಕ್ಕೆ ಕುತ್ತು ಬಂದಿದೆ. ಇಲ್ಲಿನ ಸುತ್ತಮುತ್ತಲಿನ ನಾಲ್ಕೈದು ಗ್ರಾಮದಲ್ಲಿ ಯಾವ ಕಡೆ ಬೋರ್ ಕೊರೆದರೂ ಕೆಂಪು ಹಾಗೂ ಹಳದಿ ಮಿಶ್ರಿತ ಕಲುಷಿತ ನೀರೇ ಬರುತ್ತಿದೆ. ಕಾರ್ಖಾನೆಯಿಂದ ಹೊರ ಬರುವ ಎಥೆನಾಲ್ ದ್ರವವನ್ನ ಅವೈಜ್ಞಾನಿಕವಾಗಿ ಭೂಮಿಯಲ್ಲಿ ಇಂಗಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥ ನಂಜುಡಾರಾಧ್ಯ ತಿಳಿಸಿದ್ದಾರೆ.
Advertisement
Advertisement
ಈ ನೀರು ಕುಡಿಯಲು ಯೋಗ್ಯ ಅಲ್ಲವೆಂದು ವರದಿ ಕೂಡ ಬಂದಿದೆ. ಮತ್ತೊಂದೆಡೆ ಗ್ರಾಮಸ್ಥರು ಇಷ್ಟೆಲ್ಲ ಕಷ್ಟ ಅನುಭವಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕ್ಯಾರೇ ಅಂತಿಲ್ಲ. ಜಿಲ್ಲಾಧಿಕಾರಿ ಸೇರಿ ಸಂಬಂಧಪಟ್ಟ ಅಧಿಕಾರಿಗಳು ಕಾಟಾಚಾರಕಷ್ಟೇ ಬಂದು ಹೋಗಿದ್ದಾರೆ. ಇದರಿಂದ ಗ್ರಾಮಕ್ಕೆ, ಗ್ರಾಮವೇ ಪ್ರತಿಭಟನೆಯ ಹಾದಿ ಹಿಡಿದಿದೆ. ಕಾರ್ಖಾನೆಯ ಗೇಟ್ ಮುಂಭಾಗವೇ ಶಾಮಿಯಾನ ಹಾಕಿಕೊಂಡು ಅನಿರ್ಧಿಷ್ಠಾವಧಿ ಧರಣಿ ಕುಳಿತಿದ್ದಾರೆ.
Advertisement
ಒಟ್ಟಿನಲ್ಲಿ ಸಮಸ್ಯೆಯನ್ನ ಕಣ್ಣಾರೆ ಕಂಡರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸ್ತಾರಾ ಕಾದು ನೋಡಬೇಕಿದೆ.