ಮೈಸೂರು: ಅದು ಬಡ ಕುಟುಂಬ, ಬದುಕಿನ ಬಂಡಿ ಸಾಗಿಸಲು ಮನೆಮಂದಿ ಎಲ್ಲರೂ ದುಡಿಯಲೇಬೇಕು. ಆದರೆ ವಾಸಿಸೋಕೆ ಒಂದು ಸೂರಿಲ್ಲ. ಇದ್ದ ಒಂದು ಗುಡಿಸಲನ್ನು ಅಧಿಕಾರಿಗಳು ಖಾಲಿ ಮಾಡಿಸಿದ್ದಾರೆ. ಇದೀಗ ಈ ಕುಟುಂಬ ಸಾರ್ವಜನಿಕ ಶೌಚಾಲಯದಲ್ಲಿ ವಾಸಿಸುತ್ತಿದೆ.
ಹೌದು. ಮೈಸೂರಿನ ರಾಜೇಂದ್ರ ನಗರದ ಕೃಷ್ಣಮ್ಮ ಎಂಬವರ ಕುಟುಂಬ ಕಳೆದ ಏಳು ವರ್ಷಗಳ ಹಿಂದೆ ಗುಡಿಸಲಲ್ಲಿ ವಾಸ ಮಾಡುತ್ತಿತ್ತು. ಗುಡಿಸಲು ಮುಕ್ತ ನಗರ ಮಾಡೋಕೆ ಮನೆ ಖಾಲಿ ಮಾಡಿಸಿ ಬೇರೆ ನಿವೇಶನ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರಂತೆ. 7 ವರ್ಷಗಳಿಂದ ಇರಲು ಮನೆ ಇಲ್ಲದೇ ಸಾರ್ವಜನಿಕ ಶೌಚಾಲಯದಲ್ಲೇ ವಾಸ ಮಾಡುತ್ತಿದ್ದರು. ಈಗ ಅದನ್ನೂ ಕೂಡ ಖಾಲಿ ಮಾಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕೃಷ್ಣಮ್ಮ ತಮ್ಮ ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಮತ್ತೊಂದು ಶೌಚಾಲಯದಲ್ಲಿ 13 ಮಂದಿ ವಾಸ ಮಾಡುತ್ತಿದ್ದಾರೆ. ಎಲ್ಲರೂ ರೋಡ್ ಟಾರ್ ಕೆಲಸ, ಮನೆ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಂದೂವರೆ ತಿಂಗಳ ಮಗುವಿನಿಂದ ವೃದ್ಧರವರೆಗೂ ಇದ್ದಾರೆ. ಅಷ್ಟೆ ಅಲ್ಲದೇ ಸುತ್ತಮುತ್ತಲ ಪ್ರದೇಶ ಕೊಳಚೆ ಪ್ರದೇಶವಾಗಿದ್ದು, ಶೌಚಾಲಯಕ್ಕೆ ಕಿಟಕಿ ಬಾಗಿಲುಗಳಿಲ್ಲ. ಗಬ್ಬು ವಾಸನೆಯಿಂದ ಸೊಳ್ಳೆ, ತಿಗಣೆ, ಕ್ರಿಮಿ ಕೀಟಗಳ ಕಾಟಗಳಿಂದ ನೊಂದಿದ್ದಾರೆ. ಜೊತೆಗೆ ಮೂಲಭೂತ ಸೌಲಭ್ಯ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಸಬಾನಾ ಹೇಳಿದ್ದಾರೆ.
Advertisement
Advertisement
ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿ ಅನ್ನೋ ಬಿರುದು ಮೈಸೂರಿಗಿದೆ ಆದರೆ ಇಲ್ಲಿನ ಕೆಲ ಬಡಾವಣೆಗಳ ನಿವಾಸಿಗಗಳ ಸ್ಥಿತಿ ನೋಡಿದರೆ ಅಯ್ಯೋ ಅನ್ನಿಸುತ್ತದೆ. ಎಸಿ ರೂಮಲ್ಲಿ ಕಾಲಕಳೆಯೋ ಅಧಿಕಾರಿಗಳು ಇತ್ತ ನೋಡಿದ್ರೆ ಸ್ವಚ್ಛನಗರಿಯ ದರ್ಶನವಾಗುತ್ತದೆ. ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಇವರಿಗೆಲ್ಲಾ ಒಂದು ಸೂರು ಕಲ್ಪಿಸಲಿ ಅಂತ ಕುಟುಂಬ ಒತ್ತಾಯಿಸಿದೆ.