ಮೈಸೂರು: ಎಚ್.ಡಿ ರೇವಣ್ಣ ಅವರ ಅವರ ಬರಿಗಾಲ ಪೂಜೆ ಫಲಿಸಲಿಲ್ಲ. ನಿಂಬೆ ಹಣ್ಣಿಗೆ ಬೆಲೆ ಇಲ್ಲ ಎಂದು ಮಾಜಿ ಸಚಿವ ಎ.ಮಂಜು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ 9ರ ಸಂಖ್ಯೆ ಆಗಿ ಬರೋದಿಲ್ಲ. 1999, 2009, 2019ರಲ್ಲಿನ ಸೋಲು ಇದಕ್ಕೆ ಸಾಕ್ಷಿಯಾಗಿದೆ. ನಾನು ಈ ಹಿಂದೆಯೇ ಹೇಳಿದ್ದೆ 9 ದೇವೇಗೌಡರಿಗೆ ಆಗುವುದಿಲ್ಲ ಎಂದು. ಈಗ ಅದು ಮತ್ತೆ ದೇವೇಗೌಡರ ವಿಷಯದಲ್ಲಿ ನಿಜವಾಗಿದೆ ಎಂದು ಹೇಳಿದರು.
ಮಂಗಳವಾರ ವಿಧಾನಸಭೆ ಕಲಾಪ ಮುಂದೂಡಿದ್ದರೆ ಒಳಿತಾಗುತ್ತದೆ ಅಂದುಕೊಂಡಿದ್ದರು. ಇದಕ್ಕಾಗಿ ರೇವಣ್ಣ ಮಂಗಳವಾರದವರೆಗೂ ವಿಶ್ವಾಸ ನಿರ್ಣಯ ಮುಂದೂಡಿದ್ದರು. ಅವರ ನಿಂಬೆ ಹಣ್ಣಿಗೆ, ಪೂಜೆಗೆ ಇದೀಗ ತಕ್ಕ ಉತ್ತರ ದೊರೆತಿದೆ ಎಂದರು.
ನಾನು ಯಾವುದೇ ಕಾರಣಕ್ಕೂ ಹೊಸ ಸಂಪುಟಕ್ಕೆ ಸೇರೋದಿಲ್ಲ. ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಅಲ್ಲಿ ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಯಡಿಯೂರಪ್ಪ ಹಾಗೂ ಮೋದಿಯವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಬಿಜೆಪಿ ಸರ್ಕಾರ ನೆರವಾಗಲಿದೆ. 10-17 ದಿನದಿಂದ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಮೈತ್ರಿ ಸರ್ಕಾರವನ್ನ ಯಾರೂ ಬೀಳಿಸಿಲ್ಲ, ಅವರೇ ಬೀಳಿಸಿಕೊಂಡಿದ್ದಾರೆ. ನಮ್ಮ ಸರ್ಕಾರ ಮುಂದೆ ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದರು.