ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara) ದಿನಾಂಕ ನಿಗದಿಯಾಗಿದೆ. ಇದೇ ಅ.3 ರಿಂದ ಅ.12 ರ ವರೆಗೆ ಮೈಸೂರು ದಸರಾ ಮಹೋತ್ಸವ ಜರುಗಲಿದೆ.
ಮೈಸೂರು ದಸರಾ 2024 ಉನ್ನತ ಮಟ್ಟದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah), ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾಗಲಿದ್ದು, ಅ.12 ರಂದು ಜಂಬೂಸವಾರಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಧಾನಿ ಬೆಂಗಳೂರಿಗೆ ನಾಳೆ ಯೆಲ್ಲೋ ಅಲರ್ಟ್
ದಸರಾ ಉದ್ಘಾಟನೆ ಯಾರಿಂದ ಮಾಡಿಸಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಲು ಸಭೆ ನನಗೆ ಸರ್ವಾನುಮತದಿಂದ ಅನುಮತಿ ನೀಡಿದೆ. 3-4 ದಿನಗಳಲ್ಲಿ ನಾನು ಯಾರು ಅಂತಾ ಘೋಷಣೆ ಮಾಡ್ತೀನಿ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ, ಬಿತ್ತನೆ ಆಗಿದೆ. ರೈತರು ಹರ್ಷದಿಂದ ಇದ್ದಾರೆ. ಬೆಳೆ ಚೆನ್ನಾಗಿ ಬರ್ತಿದೆ. ಎಲ್ಲಾ ಜಲಾಶಯಗಳು ತುಂಬಿವೆ. ಕಳೆದ ವರ್ಷ ಬರ ಇತ್ತು. ಹೀಗಾಗಿ ಸರಳವಾಗಿ ಆಚರಣೆ ಮಾಡಿದ್ವಿ. ಈ ಬಾರಿ ವಿಜೃಂಭಣೆಯಿಂದ ಆಚರಣೆಗೆ ತೀರ್ಮಾನ ಮಾಡಲಾಗಿದೆ ಎಂದರು. ಇದನ್ನೂ ಓದಿ: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ – ಸಿಬಿಐ ವಿಚಾರಣೆ ಆದೇಶ ಕಾಯ್ದಿರಿಸಿದ ಹೈಕೋರ್ಟ್
ಉದ್ಘಾಟನೆ ದಿನದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ
ದಸರಾ ಉದ್ಘಾಟನೆ ದಿನದಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ ಆಗಲಿವೆ. ದೀಪಾಲಂಕಾರ, ಕುಸ್ತಿ, ಯುವ ಸಂಭ್ರಮ, ಯುವ ದಸರಾ, ಕ್ರೀಡೆಗಳು ಅಂದೇ ಪ್ರಾರಂಭ ಆಗಲಿದೆ. ದಸರಾ ಉದ್ಘಾಟನೆ ಆದ ದಿನವೇ ವಸ್ತುಪ್ರದರ್ಶನ ಉದ್ಘಾಟನೆ ಆಗಬೇಕು, ಖಾಲಿ ಮಳಿಗೆಗಳು ಇರಬಾರದು, ವಸ್ತುಪ್ರದರ್ಶನದಲ್ಲಿ ಸರ್ಕಾರದ ಸಾಧನೆಗಳ ಪ್ರದರ್ಶನ ಮಾಡಬೇಕು ಅಂತಾ ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.
ದಸರಾ ಮುಗಿದ ಬಳಿಕವೂ 11 ದಿನ ದೀಪಾಲಂಕಾರ
ದೀಪಾಲಂಕಾರ ಈ ಬಾರಿ 21 ದಿನಗಳ ಕಾಲ ಇರಲಿದೆ. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಅಲಂಕಾರವಾಗಿ ಇರಬೇಕು ಅಂತಾ ಸೂಚನೆ ನೀಡಲಾಗಿದೆ. ಇಂಧನ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮಾನವ-ಆನೆ ಸಂಘರ್ಷ ತಡೆಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ – ಸಿದ್ದರಾಮಯ್ಯ
ಪ್ರವಾಸಿಗರಿಗೆ ಬಂದಾಗ ಮಾರ್ಗದರ್ಶನ ಮಾಡಲು ಸೆಕ್ಯುರಿಟಿ, ಟ್ರಾಫಿಕ್ ಮ್ಯಾನೇಜ್ಮೆಂಟ್ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಗೋಲ್ಡ್ ಕಾರ್ಡ್ ಮಾಡಲೂ ಸೂಚನೆ ಕೊಡಲಾಗಿದೆ. ಉಳಿದವರಿಗೆ ಉಚಿತವಾಗಿ ದಸರಾ ನೋಡಲು ಅವಕಾಶ ಕೊಡಬೇಕು. ಇದು ನಾಡಹಬ್ಬ, ಜನಪರ ಉತ್ಸವದಂತೆ ಇರಬೇಕು ಅಂತಾ ಸೂಚನೆ ಕೊಟ್ಟಿದ್ದೇವೆ. ಜನರ ಉತ್ಸವದಂತೆ ಆಚರಣೆ ಮಾಡ್ತೀವಿ. ದಸರಾ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ವಿಜೃಂಭಣೆಯಿಂದ ಆಚರಣೆಗೆ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ಗೋಲ್ಡ್ ಕಾರ್ಡ್ ದುರುಪಯೋಗ ಆಗದಂತೆ ನಾವು ಈ ಬಾರಿ ಕ್ರಮವಹಿಸುತ್ತೇವೆ. ಸಚಿವ ಮಹದೇವಪ್ಪಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.