– ನೀಲಿ ರೇಷ್ಮೆ ಸೀರೆಯಲ್ಲಿ ಚಾಮುಂಡಿ ತಾಯಿ ವಿರಾಜಮಾನ
ಮೈಸೂರು: ಐತಿಹಾಸಿಕ ಮೈಸೂರು ಜಂಬೂಸವಾರಿ (Jamboo Savari) ಯಶಸ್ವಿಯಾಗಿ ನೆರವೇರಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ (Ambari) ನಾಡಿನ ಅಧಿದೇವತೆ ಚಾಮುಂಡೇಶ್ವರಿ ಲಕ್ಷ ಲಕ್ಷ ಮಂದಿಗೆ ದರ್ಶನ ಭಾಗ್ಯ ಕರುಣಿಸಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನರಾಗಿದ್ದ ನಾಡದೇವತೆ ಕಂಡು ಲಕ್ಷಾಂತರ ಜನ ಪುನೀತರಾದರು. ನೀಲಿ ರೇಷ್ಮೆ ಸೀರೆ, ಹೂ ಅಲಂಕಾರದಲ್ಲಿ ಚಾಮುಂಡಿ ತಾಯಿ ನೋಡಲು ಎರಡು ಕಣ್ಣು ಸಾಲದಾಗಿತ್ತು.
Advertisement
ಶುಭ ಕುಂಭ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಐದನೇ ಬಾರಿಗೆ ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಮೈಸೂರು ಅರಮನೆ (Mysuru Palace) ಆವರಣದಿಂದ ಬನ್ನಿಮಂಟಪದವರೆಗೂ ಉತ್ಸವ ಮೂರ್ತಿ ಹೊತ್ತು ಗಜಪಡೆ ಹೆಜ್ಜೆ ಹಾಕಿತು. ನಿಶಾನೆ ಆನೆಯಾಗಿ ಧನಂಜಯ, ನೌಫತ್ ಆನೆಯಾಗಿ ಗೋಪಿ, ಕುಮ್ಕಿ ಆನೆಗಳಾಗಿ ಲಕ್ಷ್ಮಿ, ಹಿರಣ್ಯ ಆನೆಗಳು ಕ್ಯಾಪ್ಟನ್ ಅಭಿಮನ್ಯುಗೆ ಸಾಥ್ ನೀಡಿದವು.
Advertisement
Advertisement
ಅರಮನೆಯ ಉತ್ತರ ದಿಕ್ಕಿನಲ್ಲಿರುವ ಬಲರಾಮ ದ್ವಾರದ ಮೂಲಕ ರಾಜಬೀದಿಗೆ ಜಂಬೂಸವಾರಿ ಸಾಗಿತು. ಕೆಆರ್ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಬನ್ನಿ ಮಂಟಪ ತಲುಪಿತು. ಆಗಾಗ ಸುರಿಯುತ್ತಿದ್ದ ಮಳೆ ನಡುವೆಯೂ ದೇಶ ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಮಂದಿ ಜಂಬೂಸವಾರಿ ನೋಡಲು ಕಿಕ್ಕಿರಿದು ಸೇರಿದ್ದರು.
Advertisement
ದಸರಾ ಉತ್ಸವಕ್ಕೆ ಕಲಾತಂಡಗಳ ಮೆರುಗು:
ಮೈಸೂರು ಅರಮನೆ ಆವರಣದಲ್ಲಿ ವಿವಿಧ ಸ್ತಬ್ಧಚಿತ್ರಗಳು, ಕಲಾ ತಂಡಗಳ ಮೆರವಣಿಗೆ ಸಾಗಿತ್ತು. ಮೆರವಣಿಗೆ ವೇಳೆ ಜೋರು ಮಳೆ ಬಂದರೂ ಜನರು ಕಲಾ ಸಂಸ್ಕೃತಿಯನ್ನು ಆಸ್ವಾದಿಸಿದರು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೊಡವರ ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ನಂದಿ ಕೋಲು, ನವಿಲು ನೃತ್ಯ, ಬೀಸು ಕಂಸಾಳೆ, ಗಾರುಡಿ ಗೊಂಬೆ ಹೀಗೆ ಹತ್ತು ಹಲವು ಕಲಾತಂಡಗಳು ರಾಜ್ಯ ಕಲಾ ಸಂಸ್ಕೃತಿಯನ್ನು ಸಾರಿದವು. ಕೀಲು ಕುದುರೆ, ಹುಲಿ ವೇಷ, ಚಂಡೇ ವಾದನ, ಹಕ್ಕಿಪಿಕ್ಕಿ ನೃತ್ಯ, ದೊಣ್ಣೆ ವರಸೆಯಂತೂ ಕನ್ನಡ ನಾಡಿನ ವೈಭವವನ್ನು ಮತ್ತೆ ನೆನಪಿಸಿತು.
ಇನ್ನು ಸ್ತಬ್ಧಚಿತ್ರಗಳಲ್ಲಿ ಪ್ರಮುಖವಾಗಿ ಕೆಎಂಎಫ್‌ನ ಕ್ಷೀರೋತ್ಸವ, ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಟ್ಯಾಬ್ಲೋ, ಮುರುಡೇಶ್ವರದ ಶಿವನ ಮೂರ್ತಿ, ಬೆಂಗಳೂರು ಗ್ರಾಮಾಂತರದ ಟ್ಯಾಬ್ಲೋ, ಬಾಗಲಕೋಟೆಯಿಂದ ರನ್ನನ ಕಾವ್ಯ ಗದಾಯುದ್ಧ ಟ್ಯಾಬ್ಲೋ ಸೇರಿದಂತೆ ಹಲವು ಸ್ತಬ್ಧಚಿತ್ರಗಳು ಎಲ್ಲರ ಗಮನ ಸೆಳೆಯಿತು.
ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ:
ಮೈಸೂರು ಜಂಬೂ ಸವಾರಿಗೆ ಚಾಲನೆ ನೀಡುವ ಮೊದಲು ಸಿಎಂ ಸಿದ್ದರಾಮಯ್ಯ (Siddaramaiah) ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂದಿಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಈಡುಗಾಯಿ ಹೊಡೆದರು.
ನಂದಿಧ್ವಜ ಪೂಜೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು. ವಿಶೇಷವಾಗಿ ದುಷ್ಟಶಕ್ತಿಗಳ ಸಂಹಾರವಾಗಲಿ, ದುಷ್ಟಶಕ್ತಿಗಳ ವಿನಾಶವಾಗಲಿ ಎಂದರು. ಒಟ್ಟಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಯಶಸ್ವಿಯಾಗಿ ನೆರವೇರಿತು. ಮೈಸೂರಿನಲ್ಲಿ ದೀಪಾಲಂಕಾರ 10 ದಿನಗಳ ಕಾಲ ಮುಂದುವರಿಯಲಿದೆ.