– ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು ಬಲರಾಮನ ಅಂತ್ಯಕ್ರಿಯೆ
ಮೈಸೂರು: ಅನಾರೋಗ್ಯದಿಂದ ಅಸುನೀಗಿದ್ದ ದಸರಾ ಆನೆ ಬಲರಾಮ (Balarama Elephant) ಮಣ್ಣಲ್ಲಿ ಮಣ್ಣಾಗಿದ್ದಾನೆ. 14 ಬಾರಿ ದಸರಾ ಕ್ಯಾಪ್ಟನ್ ಆಗುವ ಜವಾಬ್ದಾರಿ ನಿರ್ವಹಿಸಿದ್ದ ಬಲರಾಮನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಸತತ 14 ವರ್ಷ ದಸರಾ (Mysuru Dasara) ಅಂಬಾರಿಯನ್ನ ಹೊತ್ತು ಸಾಗಿದ್ದ ಹಿರಿಯ ಆನೆ ಬಲರಾಮ ಇಹಲೋಕ ತ್ಯಜಿಸಿದ್ದು, ಹಿರಿಯ ಜೀವಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾರದ ಮನಸ್ಸಿನಿಂದಲೇ ಅಂತಿಮ ವಿದಾಯ ಹೇಳಲಾಗಿದೆ. ಇದನ್ನೂ ಓದಿ: ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ
Advertisement
Advertisement
ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಆನೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನದ (Nagarahole Forest) ಹುಣಸೂರು ಅರಣ್ಯ ವ್ಯಾಪ್ತಿಯ ಹನಗೂಡು ಬಳಿಯ ಭೀಮನಕಟ್ಟೆ ಅರಣ್ಯ ಶಿಬಿರದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಹಲವು ದಿನಗಳಿಂದ ಆಹಾರ, ನೀರು ಸೇವಿಸಿದರೂ ವಾಂತಿ ಮಾಡುತ್ತಿರುವುದಾಗಿ ಕಾವಾಡಿ ತಿಳಿಸಿದ ಮೇರೆಗೆ ಪಶುವೈದ್ಯಾಧಿಕಾರಿಗಳು ಬಲರಾಮನನ್ನು ಪರೀಶಿಲಿಸಿದಾಗ ಒಣಗಿದ ಮರದ ಚೂಪಾದ ಕವಟೆ ಸಿಕ್ಕಿದ್ದು, ಚಿಕಿತ್ಸೆ ನೀಡಲಾಗಿತ್ತು.
Advertisement
ಚಿಕಿತ್ಸೆಯ ನಂತರವು ಸುಧಾರಣೆ ಕಾಣದ ಕಾರಣ ಎಂಡೋಸ್ಕೋಪಿ ಮಾಡಿ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸಿ ಪರೀಕ್ಷೆ ನಡೆಸಿದ ನಂತರ ಬಲರಾಮನಿಗೆ ಕ್ಷಯರೋಗ ಇರುವುದಾಗಿ ವೈದ್ಯಾಧಿಕಾರರಿಗಳು ತಿಳಿಸಿದ್ದರು. ನಂತರ ಚಿಕಿತ್ಸೆಯನ್ನು ಮುಂದುವರೆಸಿದ್ದು, ಆನೆಯು ಯಾವುದೇ ಆಹಾರ, ನೀರು ಸೇವಿಸಲಾಗದೇ ಇದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಸಂಜೆ ಮೃತಪಟ್ಟಿದೆ. ಇದನ್ನೂ ಓದಿ: ಮೈಸೂರು ದಸರಾ ಆನೆ ಬಲರಾಮ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ
Advertisement
ಇನ್ನೂ ಬಲರಾಮ ಅತ್ಯಂತ ಶಕ್ತಿಶಾಲಿ ಆನೆ. ದೈತ್ಯ ಜೀವಿಯಾದ್ರು ಅತ್ಯಂತ ಮೃದು ಸ್ವಭಾವಿ ಕೂಡ ಹೌದು. ಬಲರಾಮ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಬಲರಾಮ ತನ್ನ ಕ್ಯಾಂಪ್‌ನಲ್ಲಿದ್ದ ಚಿಕ್ಕಚಿಕ್ಕ ಆನೆಗಳಿಗೂ ತರಬೇತಿದಾರನಾಗಿದ್ದ. ಕೆಲ ಜ್ಯೂನಿಯರ್ ಆನೆಗಳಿಗೂ ಕೆಲವು ವಿಷಯಗಳ ಬಗ್ಗೆ ಹೇಳಿಕೊಡುವುದರಲ್ಲಿ ನಿಸ್ಸೀಮನಾಗಿದ್ದ. ಚಿಕ್ಕ ಆನೆಗಳನ್ನು ಪ್ರೀತಿಯಿಂದ ಕಾಣುತ್ತಿದ್ದ ಬಲರಾಮನ ಸಾವಿನಿಂದ ಭೀಮನಕಟ್ಟೆ ಆನೆ ಶಿಬಿರದಲ್ಲಿ ಶೋಕ ಮಡುಗಟ್ಟಿದೆ. ಬಲರಾಮನ ಅಂತ್ಯ ಸಂಸ್ಕಾರದ ವೇಳೆ ಮಾವುತ, ಅರಣ್ಯ ಇಲಾಖೆಯ ಸಿಬ್ಬಂದಿ, ಪಶು ವೈದ್ಯರು ಭಾವುಕರಾಗಿದ್ದರು. ಸೌಮ್ಯ ಸ್ವಭಾವದ ಬಲರಾಮನನ್ನು ನೆನೆದು ಸಿಬ್ಬಂದಿ ವರ್ಗ ಕೆಲಕಾಲ ಗದ್ಗರಿತರಾದರು.
ಅತ್ಯಂತ ಸೌಮ್ಯ ಸ್ವಭಾವಿಯಾಗಿದ್ದ ಬಲರಾಮನನ್ನ ಅರಣ್ಯ ಇಲಾಖೆ ಸೋಮವಾರಪೇಟೆ ತಾಲೂಕಿನ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ 1987 ರಲ್ಲಿ ಸೆರೆ ಹಿಡಿಯಲಾಗಿತ್ತು. ಅಧಿಕಾರಿಗಳು ಮಾತ್ರವಲ್ಲದೇ, ಸಾರ್ವಜನಿಕರ ಗಮನ ಸೆಳೆದಿದ್ದ ಬಲರಾಮ, 1999 ರಿಂದ 2011ರ ವರೆಗೆ ಸತತ 14 ಬಾರಿ ಚಿನ್ನದ ಅಂಬಾರಿ ನಿರಾಯಾಸವಾಗಿ ಅರಮನೆ ಆವರಣದಿಂದ ಬನ್ನಿಮಂಟಪ ವರೆಗೂ ಹೊತ್ತು, ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಅದಾದ ಬಳಿಕ ಅನೇಕ ವರ್ಷಗಳ ಕಾಲ ದಸರಾ ಜಂಬೂ ಸವಾರಿ ಪಡೆಯ ತಂಡದ ಸದಸ್ಯನಾಗಿ ಕೂಡ, ದಸರಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದ. ಸೋಮವಾರ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಹುಣಸೂರು ವನ್ಯಜೀವಿ ವಲಯದ ಭೀಮನ ಕಟ್ಟೆ ಆನೆ ಕ್ಯಾಂಪ್ ಬಳಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಭಾನುವಾರವಷ್ಟೇ ಬಲರಾಮ ಆನೆ ಮೃತಪಟ್ಟಿತ್ತು. ಪ್ರಧಾನಿ ನರೇಂದ್ರ ಮೋದಿ ಅವರೂ ಬಲರಾಮ ಆನೆಗೆ ನಿಧನಕ್ಕೆ ಸಂತಾಪ ಸೂಚಿಸಿದ್ದರು.