ಮೈಸೂರು: ದಸರಾ ವೇದಿಕೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಶಾಸಕರನ್ನ ಕೈ ಹಿಡಿದು ಕರೆದೊಯ್ದರು. ಮುಖ್ಯಮಂತ್ರಿಗಳ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಯುವ ದಸರಾ ಕಾರ್ಯಕ್ರಮದ ಬಳಿಕ ಸಿಎಂ ಯಡಿಯೂರಪ್ಪ ಅವರು ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದರು. ಈ ವೇಳೆ ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ಅವರ ಕೈ ಹಿಡಿದು ಮುಂದೆ ಸಾಗಿಸಿದರು. ವೇದಿಕೆಯಿಂದ ಕೆಳಗೆ ಇಳಿಯುವಾಗಲೂ ಸಿಎಂ ಶಾಸಕರ ಹೆಗಲ ಮೇಲೆ ಕೈ ಹಾಕಿಯೇ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸ್ಥಳೀಯ ಬಿಜೆಪಿ ನಾಯಕರು ಇದ್ದರು. ಅವರನ್ನೆಲ್ಲ ಬಿಟ್ಟು ಸಿಎಂ ಯಡಿಯೂರಪ್ಪ ಅವರು ಶಾಸಕ ಕೆ.ಮಹದೇವ್ ಅವರ ಕೈ ಹಿಡಿದು, ಹೆಗಲ ಮೇಲೆ ಕೈ ಹಾಕಿ ವೇದಿಕೆಯಿಂದ ನಿರ್ಗಮಿಸಿದ್ದು ಕುತೂಹಲ ಮೂಡಿಸಿದೆ.
ಈ ಹಿಂದೆ ಶಾಸಕ ಮಹದೇವ್ ಅವರು ಜೆಡಿಎಸ್ ತೊರೆಯಲು ಮುಂದಾಗಿದ್ದು, ಬಿಜೆಪಿ ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಊಹಾಪೋಹಗಳನ್ನು ತಳ್ಳಿಹಾಕಿದ್ದ ಶಾಸಕರು, ನಾನು ಜೆಡಿಎಸ್ ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ ಎಂದು ಹೇಳಿದ್ದರು. ಆದರೆ ಈಗ ಅವರನ್ನು ಪಕ್ಷಕ್ಕೆ ಸೆಳೆಯಲು ಸಿಎಂ ಯಡಿಯೂರಪ್ಪ ಪ್ಲ್ಯಾನ್ ರೂಪಿಸಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.