ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (Mysuru Dasara 2024) ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯಲ್ಲಿ (Jumbo Savari) ಪಾಲ್ಗೊಳ್ಳುವ ಅನೆಗಳ ಪಟ್ಟಿಯನ್ನು ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Eshwara Khandre) ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದಾರೆ.
ಗಾಂಧಿಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ 2024ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳ ಚಿತ್ರ ಹಾಗೂ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಬಾರಿಯೂ ಮೈಸೂರು ದಸರಾ ಅಂಬಾರಿಯನ್ನು ಕ್ಯಾಪ್ಟನ್ ಅಭಿಮನ್ಯು ಹೊರಲಿದ್ದು, ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ, ಏಕಲವ್ಯ, ಕಂಜನ್, ಲಕ್ಷ್ಮಿ, ವರಲಕ್ಷ್ಮಿ ಮತ್ತು ದೊಡ್ಡಹರವೆ ಲಕ್ಷ್ಮಿ ಆನೆಗಳು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿವೆ.
ಸಂಪ್ರದಾಯದಂತೆ ಜಿಲ್ಲಾಡಳಿತದ ಸಹಯೋಗದಲ್ಲಿ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಆ.21ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮೊದಲ ತಂಡದ ಆನೆಗಳಿಗೆ ಪೂಜೆ ಸಲ್ಲಿಸಿ, ಮಾವುತರು ಮತ್ತು ಕಾವಾಡಿಗರಿಗೆ ಸತ್ಕರಿಸಿ ಆನೆಗಳನ್ನು ಕಾಡಿನಿಂದ ನಾಡಿಗೆ ಕಳುಹಿಸುವ ಗಜಪಯಣ ನಡೆಯಲಿದೆ. ಮೊದಲ ತಂಡದಲ್ಲಿ 9 ಆನೆಗಳು ಹಾಗೂ 2ನೇ ಹಂತದಲ್ಲಿ 5 ಆನೆಗಳು ನಾಡಿಗೆ ಬರಲಿವೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತಮಿಳುನಾಡು ಅರಣ್ಯ ಸಚಿವ ಎಮ್.ಮಥಿವೆಂಥನ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥ ಬ್ರಿಜೇಶ್ ದೀಕ್ಷಿತ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ, ಮೈಸೂರು ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಪಾಲ್ಗೊಂಡಿದ್ದರು