ಚೆನ್ನೈ: ಕಳೆದ ವರ್ಷ ಮೈಸೂರಿನಿಂದ (Mysuru) ದರ್ಭಾಂಗಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್ಪ್ರೆಸ್ (Bhagmati Express) ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿತ್ತು. ಆದರೆ ಇದು ಅಪಘಾತವಲ್ಲ, ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್‌ಲಾಕ್ ತೆಗೆದು ದುಷ್ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಎಂ.ಚೌಧರಿ ಅವರು, 2024ರ ಅ.11ರಂದು ಚೆನ್ನೈ ಸಮೀಪದ ಕವರೈ ಪಟ್ಟಿ ರೈಲ್ವೆ ನಿಲ್ದಾಣದಲ್ಲಿ ಭಾಗಮತಿ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡು ಭೋಗಿಗಳು ಹೊತ್ತಿ ಉರಿದಿದ್ದವು. ಆದರೆ ಇದು ಸ್ವಯಂಚಾಲಿತ ಅಥವಾ ಯಾವುದೇ ಸಾಧನದ ದಿಢೀರ್ ವೈಫಲ್ಯದಿಂದ ಆಗಿಲ್ಲ. ಬದಲಾಗಿ ರೈಲು ಹಳಿಯ ಇಂಟರ್‌ಲಾಕ್ ಕಿತ್ತ ಹಿನ್ನೆಲೆಯಲ್ಲಿ ಸಂಭವಿಸಿದೆ. ಹೀಗಾಗಿ ಈ ರೈಲು ಅಪಘಾತವನ್ನು ವಿಧ್ವಂಸಕ ಕೃತ್ಯದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೋಮುವಾದ ಹರಡಲು ಯತ್ನಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್
ಹಳಿಯ ಇಂಟರ್‌ಲಾಕ್ ವ್ಯವಸ್ಥೆಯನ್ನು ಕಿಡಿಗೇಡಿಗಳು ಕಿತ್ತಿದ್ದ ಹಿನ್ನೆಲೆ ಭಾಗಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಮುಖ್ಯ ಹಳಿ ಬಿಟ್ಟು ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿತ್ತು. ದುರಂತದಲ್ಲಿ 13 ಬೋಗಿಗಳು ಹಳಿತಪ್ಪಿ, 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಎಂದಿದ್ದಾರೆ.
ದುಷ್ಕೃತ್ಯದ ಸಂಚು:
ಇನ್ನೂ ಈ ದುಷ್ಕೃತ್ಯವು ರೈಲ್ವೆ ಇಲಾಖೆಯ ಒಳಗಿನವರಿಂದಲೇ ನಡೆದಿರುವ ಶಂಕೆ ಇದ್ದು, ರೈಲ್ವೆ ಇಲಾಖೆಯ ಗುಪ್ತಚರ ವಿಭಾಗವು ಈ ಕುರಿತು ಮಾಹಿತಿ ಕಲೆಹಾಕಬೇಕು ಎಂದು ಸಿಆರ್‌ಎಸ್ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದಾರೆ. ಜೊತೆಗೆ ರೈಲ್ವೆಯ ಮಹತ್ವದ ಸುರಕ್ಷತಾ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳ ನೇಮಕ ಮಾಡಿಕೊಳ್ಳಬಾರದು. ರೈಲ್ವೆಯ ಸುರಕ್ಷತಾ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಕುರಿತ ಕೌಶಲ್ಯ ನೀಡುವ ಕೆಲಸ ಆಗಬೇಕು ಎಂದು ಸೂಚಿಸಿದ್ದಾರೆ.
ಘಟನೆ ವೇಳೆ ಭಾಗಮತಿ ಎಕ್ಸ್ಪ್ರೆಸ್ ರೈಲಿನ ಲೋಕೋ ಪೈಲಟ್ ಜಿ.ಸುಬ್ರಮಣಿ ಅವರು ಸಮಯ ಪ್ರಜ್ಞೆ ಪ್ರದರ್ಶಿಸಿ, ತಕ್ಷಣ ತುರ್ತು ಬ್ರೇಕ್ ಹಾಕಿದ ಹಿನ್ನೆಲೆ ದುರಂತದ ತೀವ್ರತೆ ಕಡಿಮೆಯಾಗಿತ್ತು. ಹೀಗಾಗಿ ಚೆನ್ನೈ ಡಿವಿಜನ್‌ನ ಈ ಲೋಕೋ ಪೈಲಟ್ ಹೆಸರನ್ನು ಅತೀ ವಿಶಿಷ್ಟ ರೈಲು ಸೇವಾ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.ಇದನ್ನೂ ಓದಿ: Pakistan | ಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್ – 30 ಪ್ರಯಾಣಿಕರಿಗೆ ಗಾಯ, ಮೂವರು ಗಂಭೀರ