ಮೈಸೂರು: ಮೈಸೂರಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಸೂಯಜ್ ಫಾರಂ ಘಟಕದಲ್ಲಿ ಮೊಸಳೆ ಪತ್ತೆಯಾಗಿದೆ.
ಮೈಸೂರಿನ ಕೆ.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯಾರಣ್ಯಪುರಂನಲ್ಲಿರೋ ಸೂಯಜ್ ಫಾರಂನ ವಾಟರ್ ಫಿಲ್ಟರ್ ಘಟಕದಲ್ಲಿ ಮೊಸಳೆ ಪತ್ತೆಯಾಗಿದ್ದು, ಘಟಕದ ದಂಡೆಯ ಮೇಲೆ ಬಂದು ಮಲಗಿದೆ. ನಿನ್ನೆ ಸಂಜೆ ವೇಳೆ ಈ ಮೊಸಳೆ ಕಾಣಿಸಿಕೊಂಡಿದ್ದು, ಮೊಸಳೆಗೆ ಗಾಯವಾಗಿದೆ. ಅದಕ್ಕೆ ಚಲಿಸಲು ಕಷ್ಟವಾಗುತ್ತಿರುವ ಕಾರಣ ನಿತ್ರಾಣ ಸ್ಥಿತಿಯಲ್ಲಿ ದಂಡೆ ಮೇಲೆ ಬಂದು ಮಲಗಿದೆ.
ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನು ಅಲ್ಲಿಂದ ಬೇರೆಡೆ ಸ್ಥಳಾಂತರಕ್ಕೆ ಚಿಂತನೆ ನಡೆಸಿದ್ದಾರೆ. ಹಲವು ವರ್ಷದಿಂದ ಅಲ್ಲಿಯೇ ಏಳೆಂಟು ಮೊಸಳೆಗಳು ವಾಸಿಸುತ್ತಿವೆ. ಆಗಾಗ ಹೀಗೆ ಘಟಕದ ದಡಕ್ಕೆ ಬಂದು ಮಲಗುತ್ತವೆ. ಆದರೆ ಈಗ ಮಲಗಿರುವ ಈ ಮೊಸಳೆ ಚಲಿಸಲು ಕಷ್ಟವಾಗಿ ಮಲಗಿ ಬಿಟ್ಟಿದೆ. ಇದನ್ನು ಸ್ಥಳಾಂತರ ಮಾಡುವುದೇ ಸರಿ ಎಂಬ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಂತಿದೆ. ಈ ಪ್ರದೇಶಕ್ಕೆ ಪಾಲಿಕೆ ಸಿಬ್ಬಂದಿ ಹೊರತು ಪಡಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.