ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಬಂದ ಡಿ ಬಾಸ್ ಫ್ಯಾನ್ಸ್

Public TV
2 Min Read
darshan fans

– ಹಸಿದವರಿಗೆ ಊಟ, ಉಚಿತ ಅಂಬುಲೆನ್ಸ್ ವ್ಯವಸ್ಥೆ

ಬೆಂಗಳೂರು: ಕೊರೊನಾ ವೈರಸ್ ನಿಂದ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರು ಮತ್ತು ಹಸಿದವರಿಗೆ ನೆರವು ನೀಡಲು ಚಾಲೆಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಮುಂದೆ ಬಂದಿದ್ದಾರೆ.

ಕೊರೊನಾ ವೈರಸ್ ಭೀತಿಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತು ಹಸಿದವರಿಗೆ ಊಟದ ವ್ಯವಸ್ತೆಯನ್ನು ಮೈಸೂರಿನ ಡಿಬಾಸ್ ಅಭಿಮಾನಿಗಳು ಮಾಡುತ್ತಿದ್ದಾರೆ. ಇದರ ಜೊತೆಗೆ ಆರೋಗ್ಯದ ತೊಂದರೆಯಾದರೆ ಅಂತವರಿಗೆ ನೆರವಾಗಲು ಅಂಬುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಮೂಲಕ ಡಿಬಾಸ್ ಅಭಿಮಾನಿಗಳು ರಾತ್ರಿ ಕೂಡ ಹಸಿದವರಿಗೆ ಊಟ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ಈ ವಿಚಾರವಾಗಿ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ದರ್ಶನ್ ಅಭಿಮಾನಿಗಳು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನ ಸಹಕಾರದೊಂದಿಗೆ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ ಕೇಂದ್ರ ಸಮಿತಿ ಮೈಸೂರು ನಾಗರಾಜ್ (ರಾಜ್ಯಉಪಾಧ್ಯಕ್ಷರು) ನೇತೃತ್ವದಲ್ಲಿ ಇಂದು ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ ಜೊತೆಗೆ ತುರ್ತುಪರಿಸ್ಥಿತಿಗಾಗಿ ಅಂಬುಲೆನ್ಸ್ ಸೌಲಭ್ಯ ಸಹ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ರಾತ್ರಿ ಸಮಯದಲ್ಲೂ ಊಟ ಮಾಡದೇ ಇರುವವರ ಸಹಾಯಕ್ಕೆ ಬಂದಿರುವ ಡಿಬಾಸ್ ಅಭಿಮಾನಿಗಳು, ರಾತ್ರಿಯೂ ಸಹ ಊಟ ವಿತರಣೆ ಮಾಡಿದ್ದಾರೆ. ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘ -ಮೈಸೂರು ಇವರ ವತಿಯಿಂದ ರಾತ್ರಿಯು ಕೂಡ 500ಕ್ಕೂ ಹೆಚ್ಚು ಜನಕ್ಕೆ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮೈಸೂರಿನಲ್ಲಿ ಮಾಡಲಾಗಿದೆ ಎಂದು ಡಿಬಾಸ್ ಫ್ಯಾನ್ ಗ್ರೂಪ್ ಟ್ವಿಟ್ಟರ್‍ನಲ್ಲಿ ತಿಳಿಸಿದೆ.

ಜೊತೆಗೆ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ವತಿಯಿಂದ ಮೈಸೂರು ನಗರದಲ್ಲಿ ಕೊರೊನಾ ಲಾಕ್‍ಡೌನ್ ನಡುವೆ ಕೂಲಿನಾಲಿಗಾಗಿ ಮೈಸೂರಿಗೆ ಬಂದು ಹೊರಹೋಗಲು ಸಾಧ್ಯವಾಗದೆ ಬಸ್ ನಿಲ್ದಾಣ, ರಸ್ತೆಬದಿಯಲ್ಲಿ ಅತಂತ್ರವಾಗಿದ್ದ ನಿರ್ಗತಿಕರು, ಅಸಹಾಯಕರು, ಅಶಕ್ತರು, ವಯೋವೃದ್ಧರು, ಮಾನಸಿಕ ಅಸ್ವಸ್ಥರು ಮತ್ತು ಮಹಿಳೆಯರಿಗೆ ಚೆಲುವಾಂಬ ಆಸ್ಪತ್ರೆ ಮುಂಭಾಗ ಊಟ ಹಾಗೂ ನೀರು ತಲುಪಿಸುವ ಕಾರ್ಯ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ಈ ಲಾಕ್‍ಡೌನ್ ಮುಗಿಯುವವರೆಗೂ ಇದೇ ರೀತಿ ಮಾಡಲು ನಿರ್ಧರಿಸಿರುವ ದರ್ಶನ್ ಅಭಿಮಾನಿಗಳು, ಸರ್ಕಾರದ ಆದೇಶದಂತೆ ಲಾಕ್ ಡೌನ್ ಮುಗಿಯುವ ತನಕ ಸಹಾಯ ಮಾಡಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಸಂಘ ತೀರ್ಮಾನಿಸಿದೆ ಎಂದು ಟ್ವಿಟ್ಟರ್‍ನಲ್ಲಿ ಹೇಳಿಕೊಂಡಿದೆ. ಜೊತೆಗೆ ಯಾರಿಗಾದರೂ ಊಟದ ಸಮಸ್ಯೆವಾದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಕೂಡ ಮನವಿ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *