– ಹುಣಸೂರು ಕ್ಷೇತ್ರದಲ್ಲಿ ಕಮಲ ಅರಳಿಸುವುದು ನನ್ನ ಗುರಿ
ಮೈಸೂರು: ಬಿಜೆಪಿ ಸೇರುವ ಊಹಾಪೋಹಗಳಿಗೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಸಿ.ಎಚ್ ವಿಜಯಶಂಕರ್ ತೆರೆ ಎಳೆದಿದ್ದಾರೆ.
ಮೈಸೂರಿನಲ್ಲಿ ಅರ್ಜುನ ಅವಧೂತರನ್ನು ಭೇಟಿ ಮಾಡಿ ಬಳಿಕ ಮಾತನಾಡಿದ ಮಾಜಿ ಸಂಸದರು, ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮರಳಿ ಪಕ್ಷಕ್ಕೆ ಸೇರುತ್ತಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವೆ ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಹಾಗೂ ರಾಜ್ಯಕ್ಕೆ ನಿಮ್ಮಿಂದ ಅನೇಕ ಕಾರ್ಯಗಳು ಆಗಬೇಕಿದೆ. ಹೀಗಾಗಿ ನೀವು ರಾಜಕೀಯದಲ್ಲಿ ಮುಂದುವರಿಯಬೇಕು ಎಂದು ಅವಧೂತರು ಆಶೀರ್ವಾದ ಮಾಡಿದ್ದಾರೆ. ಅವರ ಸಲಹೆಯಂತೆ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇನೆ. ಅವರ ಹಾರೈಕೆಯಲ್ಲಿ ನಂಬಿಕೆ ಇದೆ ಎಂದ ಹೇಳಿದರು.
ಸಿಎಂ ಯಡಿಯೂರಪ್ಪ ಅವರು ಮೊನ್ನೆಯಷ್ಟೇ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು. ಇಬ್ಬರ ಮಧ್ಯೆ ಸುದೀರ್ಘ ಚರ್ಚೆ ನಡೆಯಿತು. ಆಗ ಸಿಎಂ, ರಾಜಕೀಯದಲ್ಲಿ ವ್ಯತ್ಯಾಸಗಳು ಆಗುವುದು ಸಹಜ. ಅದನ್ನು ಬಿಟ್ಟು ಪಕ್ಷಕ್ಕೆ ಬನ್ನಿ ಎಂದು ಸಲಹೆ ಕೊಟ್ಟಿದ್ದರು. ಅಷ್ಟೇ ಅಲ್ಲದೆ ನಳಿನ್ ಕುಮಾರ್ ಕಟೀಲ್ ಮೈಸೂರಿಗೆ ಬಂದಿದ್ದಾಗ ಪಕ್ಷಕ್ಕೆ ಬನ್ನಿ ಅಂತ ಆಹ್ವಾನ ನೀಡಿದ್ದರು. ಹೀಗಾಗಿ ಮರಳಿ ಬಿಜೆಪಿಗೆ ಸೇರಲು ಮುಂದಾಗಿದ್ದೇನೆ ಎಂದರು.
ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ. ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ಏಕೆಂದರೆ ಅದು ನನ್ನ ತಾಲೂಕು. ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಅದೇ ಪರಿಸ್ಥಿತಿ ಇದೆ. ಆದರೆ ಅವರು ಸಮರ್ಥರಿದ್ದಾರೆ. ಅದೆಲ್ಲವನ್ನೂ ಎದುರಿಸುವ ಶಕ್ತಿ ಅವರಿಗಿದೆ. ಪಕ್ಷ ನನಗೆ ಎರಡು ವರ್ಷದಲ್ಲಿ ಯಾವುದೇ ಜವಾಬ್ದಾರಿ ನೀಡಲಿಲ್ಲ. ಚುನಾವಣೆ ಸೋತ ನಂತರ ಮಾತನಾಡಿಸಲಿಲ್ಲ. ಜನರ ಮಧ್ಯೆ ಉಳಿಯಲು ಬಿಜೆಪಿಗೆ ಸೇರುವ ನಿರ್ಧಾರ ತಗೆದುಕೊಂಡಿದ್ದೇನೆ. ಈ ಹಿಂದೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಆ ಕಾಲಘಟ್ಟಕ್ಕೆ ಅದು ಸರಿ ಇತ್ತು. ಈಗ ಈ ನಿರ್ಧಾರ ಸರಿ ಇದೆ ಎಂದು ಸಿ.ಎಚ್. ವಿಜಯಶಂಕರ್ ಸ್ಪಷ್ಟನೆ ನೀಡಿದರು.