ಮೈಸೂರು: ಹುಣಸೂರು ಉಪ ಚುನಾವಣೆಯ ಮತದಾನದ ದಿನ ಕಾಂಗ್ರೆಸ್ ಕಾರ್ಯಕರ್ತರು ಗುಂಪುಗೂಡಿ ಗದ್ದಲ ಸೃಷ್ಟಿಸಿದ್ದ ಪ್ರಕರಣವನ್ನು ಕೈಬಿಡುವಂತೆ ಕಾಂಗ್ರೆಸ್ ನಿಯೋಗ ಮೈಸೂರು ಜಿಲ್ಲಾಧಿಕಾರಿ ಬಳಿ ಮನವಿ ಸಲ್ಲಿಸಿದೆ.
ಪ್ರಕರಣ ಸಂಬಂಧ ಮೈಸೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಬಿ.ಜೆ ವಿಜಯಕುಮಾರ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಕಾಂಗ್ರೆಸ್ ಮುಖಂಡರು ಡಿವೈಎಸ್ಪಿ ಜೊತೆ ಮಾತಿನ ಚಕಮಕಿ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹೀಗಾಗಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣವನ್ನು ಹಿಂಪಡೆಯುವಂತೆ ಜಿಲ್ಲಾಡಳಿತಕ್ಕೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ. ನಿಯಮದಂತೆ ನಮ್ಮ ನಾಯಕರು ಅಲ್ಲಿ ಇದ್ದುಕೊಂಡು ಜನರನ್ನು ಸಮಾಧಾನ ಪಡಿಸಲು ಮುಂದಾಗಿದ್ದರು. ಆದರೆ ಏಕಾಏಕಿ ಈ ಪ್ರಕರಣದಲ್ಲಿ ಎಫ್‍ಐಅರ್ ದಾಖಲು ಮಾಡಲಾಗಿದೆ. ಈ ಕೂಡಲೇ ಬಿ ರಿಪೋರ್ಟ್ ಹಾಕಿಸಿ ಪ್ರಕರಣವನ್ನು ಇಲ್ಲಿಗೆ ಮುಗಿಸುವಂತೆ ಕಾಂಗ್ರೆಸ್ ನಿಯೋಗ ಮನವಿ ಮಾಡಿದೆ.
ನಿಯೋಗದ ಮನವಿ ಸ್ವೀಕರಿಸಿ ವಿವರಣೆ ನೀಡಿರುವ ಜಿಲ್ಲಾಧಿಕಾರಿಗಳು, ಪ್ರಕರಣದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಈ ಹಂತದಲ್ಲಿ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಕಾನೂನಿನ ಪ್ರಕಾರ ಪ್ರಕರಣವನ್ನು ಕೈ ಬಿಡಲು ಸಾಧ್ಯವಿಲ್ಲ. ಎಫ್‍ಐಆರ್ ರದ್ದು ಪಡಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸ್ಪಷ್ಟಪಡಿಸಿದ್ದಾರೆ.