ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋಗೆ ತೆರಳಿದ್ದಾರೆ. ಹೀಗಾಗಿ ಅವರಲ್ಲಿ ರಾಜ್ಯಕ್ಕೆ ಪರಿಹಾರ ಕೊಡುವ ವಿಚಾರದ ಬಗ್ಗೆ ಮಾತನಾಡಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 7 ರಂದು ಪ್ರಧಾನಿ ಬೆಂಗಳೂರಿಗೆ ಬರುತ್ತಾರೆ. ಆ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿ ಅರ್ಥ ಮಾಡಿಸುವುದಾಗಿ ಹೇಳಿದ್ದರು. ಆದರೆ ಇಂದು ರಾಗ ಬದಲಿಸುವ ಮೂಲಕ ಜನರಿಗೆ ನೀಡಿದ್ದ ಭರವಸೆ ಹುಸಿಯಾಗಿದೆ.
ಪ್ರಧಾನಮಂತ್ರಿ ಬಂದು ಇಸ್ರೋಗೆ ತೆರಳಿದ್ದಾರೆ. ಅವರ ಜೊತೆ ಪರಿಹಾರದ ವಿಚಾರ ಮಾತನಾಡಲು ಆಗಲಿಲ್ಲ. ಆದರೆ, ಅವರಿಗೆ ರಾಜ್ಯದ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಶೀಘ್ರದಲ್ಲಿಯೇ ಪರಿಹಾರ ಘೋಷಣೆ ಆಗುತ್ತದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ದೆಹಲಿಗೆ ಹೋಗಿ ಇಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿದ್ದೇನೆ. ಈಗಾಗಲೇ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಬಂದು ಹೋಗಿದ್ದಾರೆ. ವಾಸ್ತವಿಕ ಪರಿಸ್ಥಿತಿ ಅವರಿಗೆ ಗೊತ್ತಿದೆ. ಸೂಕ್ತ ಪರಿಹಾರ ಸಿಗುತ್ತದೆ ಎಂದು ಮತ್ತೆ ಭರವಸೆ ನೀಡುವ ಮೂಲಕ ಪ್ರಧಾನಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.