– ಪವಾಡಸದೃಶ ರೀತಿಯಲ್ಲಿ ಬೈಕ್ ಸವಾರ ಪಾರು
ಮೈಸೂರು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬಗಳು ಉರುಳಿ ಬಿದ್ದು ಒಂದು ಕಾರು ಜಖಂಗೊಂಡು ಒಂದು ಬೈಕ್ ಬೆಂಕಿಗೆ ಅಹುತಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಇಲ್ಲಿನ ರೇಸ್ ಕೋರ್ಸ್ ಹಿಂಭಾಗದ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಉಂಟಾಗಿಲ್ಲ. ಕಾರು ಚಾಲಕ ಅತಿ ವೇಗದಿಂದ ಕಾರು ಚಾಲನೆ ಮಾಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆಗ ವಿದ್ಯುತ್ ಕಂಬಗಳು ನೆಲಕ್ಕೆ ಬಿದ್ದಿವೆ. ಈ ವೇಳೆ ವಿದ್ಯುತ್ ಕಂಬ ಕಾರಿನ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಉರುಳಿದ್ದು, ಸವಾರ ತಕ್ಷಣ ಬೈಕ್ ಬಿಟ್ಟು ಓಡಿದ್ದಾರೆ. ತಕ್ಷಣ ಅವರನ್ನ ಸ್ಥಳದಲ್ಲಿದ್ದವರು ರಕ್ಷಣೆ ಮಾಡಿದ್ದಾರೆ.
ಗಾಯಾಳುವನ್ನ ರಕ್ಷಿಸಿದ ಕೆಲವೇ ಸೆಕೆಂಡ್‍ನಲ್ಲಿ ವಿದ್ಯುತ್ ಸ್ಪರ್ಶದಿಂದ ಬೈಕ್ ಬೆಂಕಿಗೆ ಅಹುತಿಯಾಗಿದೆ. ಬೈಕ್ ಹೊತ್ತಿ ಉರಿದು, ಟ್ಯಾಂಕರ್ ಸ್ಫೋಟಗೊಂಡ ದೃಶ್ಯಗಳು ಸೆರೆಯಾಗಿದೆ.
ಘಟನೆಯಲ್ಲಿ ಬೈಕ್ ಸವಾರ ಭರತ್ ಹಾಗೂ ಕಾರು ಚಾಲಕ ಸಂತೋಷ್‍ಗೆ ಗಾಯವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಿದ್ದರ್ಥನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.