ಮೈಸೂರು: ಆಶಾ ಕಾರ್ಯಕರ್ತೆಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಖಲೀಲ್, ಮೆಹಬೂಬ್ ಹಾಗೂ ಜೀಸನ್ ಎಂದು ಗುರುತಿಸಲಾಗಿದೆ.
ನಡೆದಿದ್ದೇನು..?
ಕೊರೊನಾ ವೈರಸ್ ಭೀತಿಯಿಂದ ವೈದ್ಯರು ಹಾಗೂ ಆಶಾಕಾರ್ಯಕರ್ತೆಯರು ಮನೆ ಮನೆ ಸರ್ವೆ ಮಾಡುತ್ತಿದ್ದಾರೆ. ಹಾಗೆಯೇ ಮೈಸೂರಿನ ಬನ್ನಿಮಂಟಪ ಸರ್ಕಾರಿ ಆಸ್ಪತ್ರೆಯ ಆಶಾ ಕಾರ್ಯಕರ್ತೆ ಸುಮಯಾ ಫಿರ್ದೋಶ್ ಅವರು ಆಲೀಂ ನಗರಕ್ಕೆ ತೆರಳಿದ್ದರು. ಈ ವೇಳೆ ಸುಮಯಾ ಅವರು ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ ಅಂತ ಬುದ್ಧಿವಾದ ಹೇಳಿದ್ದರು. ಇದರಿಂದ ಕೆರಳಿದ ಪುಂಡರು ಗಲಾಟೆ ಮಾಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ಮೇಲೆ ಮುಗಿಬಿದ್ದಿದ್ದರು.
ಈ ಕುರಿತು ಸುಮಯಾ ಅವರು ಎನ್ ಆರ್ ಠಾಣೆಗೆ ದೂರು ನೀಡಿದ್ದರು. ಸದ್ಯ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಈ ಸಂಬಂಧ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಅಲೀಂ ನಗರದಲ್ಲಿ ಸುಮಾಯಾ ಫಿರ್ದೋಶ್ ಎಂಬ ಆಶಾ ಕಾರ್ಯಕರ್ತೆಗೆ ದಮ್ಕಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಮ್ಕಿ ಹಾಕಿದ ಆರೋಪಿಗಳ ವಿರುದ್ದ ಎಫ್‍ಐಆರ್ ಹಾಕಲಾಗಿದೆ.
ಕೊರೊನಾ ವಾರಿರ್ಯಸ್ ವಿರುದ್ಧ ಹೋರಾಡೋರಿಗೆ ತೊಂದರೆ ಕೊಟ್ಟರೆ ಕೇಸು ಗ್ಯಾರಂಟಿಯಾಗುತ್ತದೆ. ಉತ್ತರ ಪ್ರದೇಶ ಹಾಗೂ ಕೇರಳದ ಮಾದರಿಯ ಕಾನೂನು ಜಾರಿ ಮಾಡುವ ಚಿಂತನೆ ಮಾಡಿದ್ದೇವೆ. ಇಂದು ಸಂಜೆಯೋಳಗೆ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಅವರು ತಿಳಿಸಿದರು.