ಮೈಸೂರು/ರಾಮನಗರ: ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಸಿಮಿಕೋಟ್ ಮತ್ತು ಹಿಲ್ಸಾದಲ್ಲಿ ಸಿಲುಕಿದ್ದ ಯಾತ್ರಿಗಳನ್ನು ಭಾರತಕ್ಕೆ ಕಳುಹಿಸಲಾಗಿದೆ. ಮಾನಸ ಸರೋವರ ಯಾತ್ರೆಗೆ ಹೋಗಿ 5 ದಿನಗಳ ಕಾಲ ಸಂಕಷ್ಟಕ್ಕೆ ಸಿಲುಕಿದ್ದ ಯಾತ್ರಾರ್ಥಿಗಳು ರಾತ್ರಿ ತಮ್ಮ ಮನೆಗೆ ಸೇರುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.
ಮೈಸೂರಿನ ಮಂದಿ ದೀಡ್ ನಮಸ್ಕಾರ ಹಾಕೋ ಮೂಲಕ ಯಾತ್ರೆ ಮಾಡಿದ್ದಾರೆ. ಮೈಸೂರು ಭಾಗದ ಮಂಡಲಂ ಟ್ರಾವೆಲ್ಸ್ ನಿಂದ ಒಟ್ಟು 26 ಜನರು ಮಾನಸ ಸರೋವರ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ತವರಿಗೆ ವಾಪಾಸ್ ಬಂದಿದ್ದಾರೆ. ಮೈಸೂರು, ಬೆಂಗಳೂರು, ಚಾಮರಾಜನಗರ, ದಾವಣಗೆರೆ ಭಾಗದ ಯಾತ್ರಿಗಳು ಸುಸೂತ್ರವಾಗಿ ಯಾತ್ರೆ ಮುಗಿಸಿದ್ದಾರೆ. ಹವಾಮಾನ ವರದಿಯ ಆಧಾರದ ಮೇಲೆ ಯಾತ್ರೆಯ ಮಾರ್ಗ ಸಿದ್ಧಪಡಿಸಿಕೊಂಡ ನೈಸರ್ಗಿಕ ವಿಕೋಪಕ್ಕೆ ಇವರೆಲ್ಲಾ ಸಿಲುಕುವುದು ತಪ್ಪಿದೆ. ಇದನ್ನೂ ಓದಿ: ಮಾನಸ ಸರೋವರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 26 ಕನ್ನಡಿಗರು ವಾಪಸ್
ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ನಾಲ್ವರು ಯಾತ್ರಾರ್ಥಿಗಳು ಮಾನಸ ಸರೋವರಕ್ಕೆ ತೆರಳಿದ್ರು. ಅಲ್ಲಿ ನಡೆಯುತ್ತಿದ್ದ ಮಹಾರುದ್ರ ಯಾಗದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತೆರಳಿ ಸಿಮಿಕೋಟ್‍ನಲ್ಲಿ 5 ದಿನಗಳ ಕಾಲ ಹವಾಮಾನ ವೈಪರಿತ್ಯದಿಂದ ನರಕಯಾತನೆ ಅನುಭವಿಸಿ ಇದೀಗ ಮನೆಗೆ ಮರಳಿದ್ದಾರೆ. ಇದೀಗ ಯಾತ್ರಾರ್ಥಿಗಳೆಲ್ಲರ ಮನೆಯಲ್ಲಿ ಸಂತೋಷದ ವಾತಾವರಣವನ್ನುಂಟು ಮಾಡಿದೆ. ಈ ಬಗ್ಗೆ 5 ದಿನಗಳ ಕಾಲ ನರಕಯಾತನೆ ಅನುಭವಿಸಿ ಮನೆ ಸೇರಿದ ಯಾತ್ರಾರ್ಥಿ ಮಲ್ಲೇಶ್ ತಾವು ಅನುಭವಿಸಿದ ನರಕಯಾತನೆಯನ್ನ ಬಿಚ್ಚಿಟ್ಟಿದ್ರೆ, ಮನೆಗೆ ಮತ್ತೆ ತಮ್ಮ ಪತಿ ಆಗಮಿಸಿದ್ದಕ್ಕೆ ಅವರ ಪತ್ನಿ ಅಲ್ಲದೇ ಕುಟುಂಬದವರು ಕೂಡಾ ಸಂಭ್ರಮಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಲ್ಲೇಶ್, ಕಳೆದ ತಿಂಗಳು 22ರಂದು ಇಲ್ಲಿಂದ ಹೊರಟಿದ್ವಿ. ನಮ್ಮ ಜೊತೆ ಇಲ್ಲಿಂದ ಒಟ್ಟು 250-60ಜನ ಯಾತ್ರಿಗಳಿದ್ದರು. ಸಿಮಿಕೋಟ್ ಗೆ ಬಂದಾಗ ನಮ್ಮ ಫೋನ್ ಗಳು ಕಾರ್ಯಾಚರಿಸಲಿಲ್ಲ. ಸಿಕ್ಕಾಪಟ್ಟೆ ಮಳೆ ಇದ್ದಿದ್ದರಿಂದ ಹೊರಗಡೆ ಎಲ್ಲೂ ಹೋಗಲು ಅಸಾಧ್ಯವಾಗಿತ್ತು. ಹೀಗಾಗಿ ನಮ್ಮನ್ನು ಯಾವುದೋ ಒಂದು ಮನೆಗೆ ಶಿಫ್ಟ್ ಮಾಡಿದ್ರು. ಆ ಮನೆಯಲ್ಲಿ ನಾವು 28 ಜನ ಇದ್ವಿ. ನನ್ನ ಕಾಲಿಗೆ ಏಟಾಗಿ ನಾಲ್ಕು ದಿವಸವಾಗಿತ್ತು. ಹೀಗಾಗಿ ಕಾಲು ಊದಿಕೊಂಡಿತ್ತು. ಈ ಬಗ್ಗೆ ನಾನು ಅಲ್ಲಿನ ಏಜೆನ್ಸಿಯವರ ಬಳಿ ಹೇಳಿಕೊಂಡರೂ ಅವರು ಸ್ಪಂದಿಸಲಿಲ್ಲ ಅಂತ ತಮ್ಮ ನೋವು ತೋಡಿಕೊಂಡರು.