DistrictsKarnatakaLatestMain PostMandya

ಪುನರಾರಂಭಗೊಂಡ ಮೈಶುಗರ್ ಸಕ್ಕರೆ ಕಾರ್ಖಾನೆ – ರೈತರ ಮುಖದಲ್ಲಿ ಮಂದಹಾಸ

ಮಂಡ್ಯ: ಕನ್ನಂಬಾಡಿ ಕಟ್ಟೆ ಹೇಗೆ ಹಳೆ ಮೈಸೂರು ಭಾಗದ ಜೀವನಾಡಿ, ಹಾಗೆ ಮಂಡ್ಯದ ಜನರಿಗೆ ಮೈ ಶುಗರ್ ಸಕ್ಕರೆ ಕಾರ್ಖಾನೆ ಜೀವನಾಡಿ. ಕಳೆದ ನಾಲ್ಕು ವರ್ಷಗಳಿಂದ ಬಂದ್ ಆಗಿದ್ದ ಈ ಕಾರ್ಖಾನೆ ಇದೀಗ ಮತ್ತೆ ಪುನರಾರಂಭಗೊಂಡಿದೆ. ಈ ಮೂಲಕ ಸಕ್ಕರೆ ನಾಡಿನ ಜನರಿಗೆ ರಾಜ್ಯ ಸರ್ಕಾರ ಗೌರಿ-ಗಣೇಶ ಹಬ್ಬದ ಗಿಫ್ಟ್ ನೀಡಿದೆ.

ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದ್ರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ಸಿಲುಕಿ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ತಬ್ಧವಾಗಿತ್ತು. ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದ್ರೆ. ಇನ್ನು ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದ್ರೂ ಸರಿ. ಹೇಗಾದ್ರೂ ಆಗ್ಲೀ ಮೊದಲು ಕಾರ್ಖಾನೆ ಆರಂಭವಾಗ್ಲೀ ಅಂತಾ ಒತ್ತಾಯಿಸಿದ್ರು. ಇದು ಸರ್ಕಾರಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವಂತೆ ಹೇಳಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಪುನಾರಂಭವಾಗಿದೆ. ಇದನ್ನೂ ಓದಿ: 4 ವರ್ಷದ ಬಳಿಕ ಆರಂಭವಾಯಿತು ಮೈಶುಗರ್ ಕಾರ್ಖಾನೆ

ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇದೀಗ ಮುನ್ನುಡಿ ಬರೆಯಲಾಗಿದೆ. ಕಳೆದ ತಿಂಗಳು ಬಾಯ್ಲರ್‌ಗೆ ಬೆಂಕಿ ಹಾಕುವ ಮೂಲಕ ಕಾರ್ಖಾನೆ ಪ್ರಾರಂಭಕ್ಕೆ ಆರಂಭಿಕ ಹೆಜ್ಜೆ ಹಾಕಲಾಗಿತ್ತು. ಇದೀಗ ಕಾರ್ಖಾನೆಯಲ್ಲಿ ಕಬ್ಬಿನ ಕ್ರಷರ್ ಮಿಷನ್‍ಗೆ ಪೂಜೆ ಸಲ್ಲಿಸಿ ಪ್ರಾರಂಭಗೊಳಿಸಲಾಗಿದೆ. ಇನ್ನೂ ಸೆ.10ಕ್ಕೆ ಸಿಎಂ ಬಸವರಾಜ ಬೊಮ್ಮಯಿ ಅವರು ಆಗಮಿಸಲಿದ್ದು, ಮೈಶುಗರ್ ಆರಂಭದ ಬಗ್ಗೆ ಬಿಜೆಪಿ ಸರ್ಕಾರ ಕಾರ್ಯ ಕ್ಷಮತೆಯ ಬಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೈಶುಗರ್ ಪುನರಾಂಭದ ಮೂಲಕ ಈ ಬಾರಿಯ ಗೌರಿ-ಗಣೇಶ ಹಬ್ಬದ ಉಡುಗೊರೆಯನ್ನು ಮಂಡ್ಯದ ಜನರಿಗೆ ರಾಜ್ಯ ಸರ್ಕಾರ ನೀಡಲು ನಿರ್ಧರಿಸಿದೆ.

ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಸರ್ಕಾರದ ಈ ನಿರ್ಧಾರ ರೈತರಲ್ಲಿ ಮಂದಹಾಸ ಮೂಡಿಸಿದ್ದು, ಎಷ್ಟೋತ್ತಿಗೆ ಫ್ಯಾಕ್ಟರಿ ಚಿಲುಮೆಯಲ್ಲಿ ಹೊಗೆ ನೋಡಬಹುದು ಎಂದು ಕಾತುರದಲ್ಲಿ ಇದ್ದಾರೆ. ಸರ್ಕಾರ ಈ ಕಾರ್ಖಾನೆಯ ಬಾಗಿಲು ಮತ್ತೆ ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಮೈ ಶುಗರ್ ಕೇವಲ ರೈತರಿಗೆ ಮಾತ್ರವಲ್ಲ ಮಂಡ್ಯದ ಜನರ ಭಾವನಾತ್ಮಕ ಸಂಬಂಧವಾಗಿದೆ. ಹೀಗಾಗಿ ಕಾರ್ಖಾನೆಯ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಅಲ್ಲದೇ ಸಂಸದೆ ಸುಮಲತಾ ಅಂಬರೀಶ್ ಅವರು ಕಾರ್ಖಾನೆಯ ಪುನಾರಂಭಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್‌ ಜಿಎಸ್‌ಟಿ ಶೇ.28 ಏರಿಕೆ – 1.43 ಲಕ್ಷ ಕೋಟಿ ರೂ.ನಲ್ಲಿ ಯಾವ ರಾಜ್ಯದ ಪಾಲು ಎಷ್ಟು?

ಒಟ್ಟಾರೆ ನಾಲ್ಕು ವರ್ಷಗಳ ಕಾಲ ಮೈ ಶುಗರ್ ಕಾರ್ಖಾನೆಗೆ ಹಿಡಿದಿದ್ದ ಗ್ರಹಣ ಇದೀಗ ಅಂತ್ಯಗೊಂಡಿದೆ. ಸರ್ಕಾರ ಸಕ್ಕರೆ ನಾಡಿನ ಜನರಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನೀಡಿರುವ ಈ ಬಂಪರ್ ಉಡುಗೊರೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

Live Tv

Leave a Reply

Your email address will not be published.

Back to top button